ಸ್ಟೇಟಸ್ ಕತೆಗಳು (ಭಾಗ ೨೬೨) - ಚಪ್ಪರ
ಆ ಮನೆಯಲ್ಲಿ ಮದುವೆ ಕಾರ್ಯಕ್ರಮ ನಿಗದಿಯಾಗಿತ್ತು. ಮನೆಯ ಮುಂದಿನ ಅಂಗಳಕ್ಕೆ ಚಪ್ಪರ ಹಾಕಲು ಅಡಿಕೆಮರ ಕಡಿಯೋಕೆ ತೋಟಕ್ಕೆ ಹೋಗಿದ್ದ ರಮೇಶ. ಆ ಮರ ಅಷ್ಟು ಸುಲಭವಾಗಿ ಮುರಿಯುವುದಲ್ಲ. ಆದರೆ ಇವನ ನಾಲ್ಕೇ ಪೆಟ್ಟಿಗೆ ಗಟ್ಟಿ ಮರವೇ ಬುಡಸಮೇತ ನೆಲಕ್ಕುರುಳಿತು. ಏನೋ ಒಂಥರಾ ಭಯ ಆದರೂ ಇನ್ನೂ ಹತ್ತು ಮರಗಳನ್ನು ಕಡಿದು ಅಂಗಳಕ್ಕೆ ತಂದು ಚಪ್ಪರ ಹಾಕಿದ. ಅಂಗಳ ತಂಪಾಗಿತ್ತು. ಮನೆಯ ಒಳಗೂ ಕೂಡ. ಓಡಾಟ ಆರಂಭವಾಯಿತು. ಜನ ಸೇರಿದರೂ. ಮದುವೆಯಾಯಿತು. ನಡೆದದ್ದನ್ನೆಲ್ಲಾ ಒಮ್ಮೆ ಕುಳಿತು ಯೋಚಿಸಿ ಪರಿಶೀಲಿಸಿದರು. ಚಪ್ಪರ ಹಾಗಿರಲಿ ಅದು ಬಿದ್ದು ಹೋಗುವವರೆಗೆ ಅಂತ ತೀರ್ಮಾನ ಆಯ್ತು. ಬಾಡಿಗೆಗೆ ತಂದಿರುವ ವಸ್ತುಗಳನ್ನೆಲ್ಲ ಹಿಂತಿರುಗಿಸಿದರು. ವಾರಗಳು 3 ದಾಟಿದಾಗ ಮನೆಯ ಹಿರಿ ಜೀವ ಒಂದು ಎದೆ ಹಿಡಿದುಕೊಂಡು ಸ್ತಬ್ಧವಾಯಿತು. ಮತ್ತೆ ಜನ ಸೇರಿದರು ಸಂಭ್ರಮ ಕಂಡಿದ್ದ ಚಪ್ಪರ ದುಃಖವನ್ನು ಪರಿಚಯ ಮಾಡಿಕೊಂಡಿತು. ನಿಂತಲ್ಲೇ ಭಾವಗಳೆರಡು ದೊರಕಿತು. ಕುಳಿತವರು ಅವರೇ ಆದರೂ ಭಾವಗಳು ಬೇರೆ. ನೆಲ ತಂಪಾಗಿದೆ. ಮನೆಯೊಳಗೆ ದುಃಖ ಮಡುಗಟ್ಟಿದೆ. ಚಪ್ಪರ ಇನ್ನೆಷ್ಟು ದಿನ ಉಳಿಯುತ್ತೋ ಗೊತ್ತಿಲ್ಲ. ಮುಂದೇನಾಗುತ್ತೋ ಅರಿವಿಲ್ಲ. ಬದುಕೋದು ದಿನವೂ ಇದ್ದದ್ದೇ ...ಹೊಸ ಭಾವಗಳು ಬೆಸುಗೆಯಾಗುತ್ತಾ ಸಾಗುತ್ತದೆ.
-ಧೀರಜ್ ಬೆಳ್ಳಾರೆ
ಚಿತ್ರ ಕೃಪೆ: ಇಂಟರ್ನೆಟ್ ತಾಣ