ಸ್ಟೇಟಸ್ ಕತೆಗಳು (ಭಾಗ ೨೬೩) - ಸ್ವಚ್ಛತೆ

ಸ್ಟೇಟಸ್ ಕತೆಗಳು (ಭಾಗ ೨೬೩) - ಸ್ವಚ್ಛತೆ

ಗೆಲುವಿನ ಸಂಭ್ರಮ ಮುಗಿಲುಮುಟ್ಟಿದೆ. ಅದಕ್ಕಾಗಿ ಒಂದಿಷ್ಟು ಪಟಾಕಿಗಳು ಸಿಡಿದಿವೆ. ಚಿತ್ತಾರಗಳು ವೇದಿಕೆಯಲ್ಲಿ ತುಂಡು ತುಂಡುಗಳಾಗಿ ಹಾರಿ ಬಿದ್ದಿವೆ. ರಾತ್ರಿ 12 ದಾಟಿದೆ. ಸಂಭ್ರಮಿಸಿದವರು ಸಂಭ್ರಮವನ್ನು ಮತ್ತಷ್ಟು ಹೆಚ್ಚಿಸುತ್ತಾ ಗಾಡಿಯನ್ನೇರಿ ಹೊರಟಿದ್ದಾರೆ. ಆಯೋಜಕರು ಮಾತುಕತೆಗಳನ್ನು ಆಡುತ್ತಾ ಹರಟೆ ಹೊಡೆಯುತ್ತಾ ಮನೆಗೆ ತೆರಳಿದ್ದಾರೆ. ಈಗ ಕೆಲಸವಾರಂಭ ಅವರದ್ದು. ಸ್ವಚ್ಛತೆ ಮಾಡಲೇಬೇಕು. ಇನ್ನೊಂದು ಕಾರ್ಯಕ್ರಮವಿದೆ. ಅವರಿಗೆ ಚೂರು ಬೇಸರವಿಲ್ಲ. ಅವರು ಇನ್ನೂ ಹೆಚ್ಚು ಕಾರ್ಯಕ್ರಮಗಳಾಗಲಿ ಅಂತ ಬಯಸುವವರು. ಕಾರಣ ಮನೆಯಲ್ಲಿ ಕಾಯುತ್ತಿರುವ ಹಲವು ಬಾಯಿಗಳಿಗೆ ಇವರ ಕೈ ದುಡಿದಾಗ ಮಾತ್ರ  ಹೊಟ್ಟೆಗೆ ಒಂದಿಷ್ಟು ಹಿಟ್ಟು ಸಿಗುತ್ತದೆ. ಇಂತಹದೇ ಕಾರ್ಯಕ್ರಮವಾಗಬೇಕು ಅನ್ನೋ ನಿರ್ಬಂಧವಿಲ್ಲ. ಜನ ಸೇರಬೇಕು ಕಾರ್ಯಕ್ರಮವಾಗಬೇಕು. ಅಲ್ಲಿ ನಡೆಯುತ್ತಿರುವ ಕಾರ್ಯಕ್ರಮದ ಜೊತೆ ಅವರು ಯಾವುದೇ ಸಂಬಂಧಗಳನ್ನು ಇಟ್ಟುಕೊಳ್ಳುವುದಿಲ್ಲ. ತಾನು ಟಿವಿ ಒಳಗೆ ಕಂಡ ಮಹಾನ್ ವ್ಯಕ್ತಿ ತನ್ನ ಮುಂದೆಯೇ ಹಾದು ಹೋದರೂ ಅವರನ್ನು ನಿಂತು ಮಾತನಾಡಿಸಬೇಕು ಎನ್ನುವ ಆಸೆ ಅತಿಯಾದರೂ ತಡೆಹಿಡಿದು ಕೆಲಸ ನಿರ್ವಹಿಸಬೇಕು. ಕೆಲಸವನ್ನ ಪ್ರೀತಿಸುತ್ತಾರೆ ಅದಕ್ಕಾಗಿ ಕೆಲಸ ಮಾಡುತ್ತಾರೆ. ಪ್ರತಿಯೊಬ್ಬರೂ ಪ್ರೀತಿಸಿ ಕೆಲಸ ಮಾಡಿದರೆ ಕೆಲಸಕ್ಕೊಂದು ಅರ್ಥ ಸಿಗುತ್ತದೆ. ತೆಗೆದುಕೊಳ್ಳುವ ಸಂಬಳಕ್ಕೂ ಮೌಲ್ಯ ಸಿಗುತ್ತದೆ. ಇದು ಅವರ ನಂಬಿಕೆ. ಮುಂಜಾನೆಯಾಗುವ ಸಮಯ ಇನ್ನೊಂದು ಕಾರ್ಯಕ್ರಮದ ಆಯೋಜಕರು ಆಗಮಿಸಿದ್ದಾರೆ. ಸಣ್ಣ ನಿದ್ದೆಗೆ ಇವರು ಮೂಲೆಯ ಕೋಣೆಯಲ್ಲಿ ಒರಗಿದೆ ಇವರು ಮತ್ತೆ ಬಾಗಿಲು ಬಡಿತದ ಸದ್ದಿಗೆ ಪೊರಕೆ ಹಿಡಿದು ಹೊರಕ್ಕೆ ನಡೆದರು.

-ಧೀರಜ್ ಬೆಳ್ಳಾರೆ

ಚಿತ್ರ ಕೃಪೆ: ಇಂಟರ್ನೆಟ್ ತಾಣ