ಸ್ಟೇಟಸ್ ಕತೆಗಳು (ಭಾಗ ೨೬೪) - ಆಡಂಬರ

ಸ್ಟೇಟಸ್ ಕತೆಗಳು (ಭಾಗ ೨೬೪) - ಆಡಂಬರ

"ನೀವು  ನಮ್ಮ ಮನೆಯ ಈ ಸಲದ ಭೂತಾರಾಧನೆ ನೋಡ್ಲಿಕ್ಕೆ ಬರಬೇಕಿತ್ತು, ಸುಮಾರು ಆರು ಲಕ್ಷದವರೆಗೆ ನಂಗೆ ಖರ್ಚಾಗಿದೆ. ಏನು ಗ್ರಾಂಡ್ ಆಗಿತ್ತು ಅಂತೀನಿ. ಲೈಟಿಂಗ್ ನೋಡಬೇಕಿತ್ತು, ಕುಳಿತುಕೊಳ್ಳುವ ವ್ಯವಸ್ಥೆ ಇತ್ತು. ಸುತ್ತಮುತ್ತಾ ಎಲ್ಲೂ ಹೀಗಾಗಿರಲಿಲ್ಲ." "ಹಾ ಹೌದು ಕೇಳ್ದೆ ಸುದ್ದಿ. ದೈವದ ಗಂಧಪ್ರಸಾದ ತೆಗೆದುಕೊಂಡಿರಾ" "ಸ್ವಲ್ಪ ಬ್ಯುಸಿ ಆಗ್ಬಿಟ್ಟೆ , ಕಾರ್ಯಕ್ರಮ ವ್ಯವಸ್ಥೆ ಮಾಡುವುದಿತ್ತು". "ರಾಜು ಈ ಸಲ ಇವರ ಆರಾಧನೆಗಿಂತ ನಮ್ಮದು ಜಾಸ್ತಿಯಾಗಬೇಕು. ನೆನಪಿದೆ ತಾನೇ" ಮಾತುಕತೆಗಳೇ ಜೊರಾದವು. ಒಳಗೆ ಕುಳಿತಿದ್ದ ದೈವ ಯೋಚಿಸಿತು, "ಅಲ್ಲಾ ಮಾರಾಯ, ನಾನು ಯಾವಾಗ ನನಗಿಷ್ಟು ಆಡಂಬರ ವೈಭವ ಬೇಕು ಅಂತ ಬಯಸಿದ್ದೇನೆ. ನಿನಗೆ ಕೈಯಲ್ಲೊಂದಿಷ್ಟು ದುಡ್ಡು ಓಡಾಡೋಕೆ ಆರಂಭವಾದಾಗ ಭಕ್ತಿಗಿಂತ ಜಾಸ್ತಿ ಆಡಂಬರವನ್ನು ಪ್ರೀತಿಸ್ತೀಯಾ.ಇಲ್ಲಿ ಬರುವವರು ಪ್ರತಿಯೊಬ್ಬರು ಭಕ್ತಿಯಿಂದ ಕೈಮುಗಿದು ಬರುತ್ತಾರೆ ವಿನಃ ಯಾರು ಕೂಡ ನೀನಿಲ್ಲಿ ಸಿದ್ದ ಮಾಡಿರೋ ಅಲಂಕಾರವನ್ನು ಆಗಲಿ, ಸಂತೆಗಳನ್ನು ಆಗಲಿ ನೋಡುವವರಲ್ಲ. ಮತ್ತೆ ನಾನು ಯಾವತ್ತೂ ನನಗೆ ಇಷ್ಟು ವೈಭೋಗದ ಆರಾಧನೆ ಬೇಕು ಅಂತ ಬಯಸಿಲ್ಲ. ಕೈಮುಗಿದು ನಿನ್ನ ಮನೆಯ ನಿನ್ನ ಬಳಕೆಯ ವಸ್ತುಗಳನ್ನು ನನಗೆ ಇಟ್ಟು ಪೂಜಿಸಬಹುದು. ಕೈಮುಗಿದು ನೆಲೆಯಾಗುತ್ತೇನೆ. ಭಕ್ತಿ ತುಂಬಿದ್ದಲ್ಲಿ ತಲೆತಗ್ಗಿಸಿ ಕಾವಲಾಗುತ್ತೇನೆ. ಅರಿವಿದ್ದು ದಾರಿ ತಪ್ಪುತ್ತಿರುವ ನಿನಗೆ ಇನ್ನು ಹೇಗೆ ಬುದ್ಧಿ ಹೇಳಲಿ ಎನ್ನುವುದು ಗೊತ್ತಾಗುತ್ತಿಲ್ಲ. ಅರ್ಥೈಸಿಕೊಂಡು ಬೆಳೆದರೆ ಒಳ್ಳೆಯದು." ದೈವಸ್ಥಾನದ ಒಳಗೆ ದೀಪ ಮತ್ತಷ್ಟು ಪ್ರಬಲವಾಗಿ ಉರಿಯುತ್ತಿತ್ತು. ಹೊರಗಡೆ ಆಡಂಬರಕ್ಕಾಗಿ ಇಟ್ಟ ವರ್ಣ ಅಲಂಕೃತ ದೀಪಗಳು ಆರಿ ಹೋದವು....

-ಧೀರಜ್ ಬೆಳ್ಳಾರೆ

ಚಿತ್ರ ಕೃಪೆ: ಇಂಟರ್ನೆಟ್ ತಾಣ