ಸ್ಟೇಟಸ್ ಕತೆಗಳು (ಭಾಗ ೨೬೫) - ಅನಿಸಿಕೆ
ಎಲ್ಲರ ಮನೆಯ ಅನ್ನದ ಬಟ್ಟಲುಗಳು ಪೂರ್ತಿಯಾಗಿ ತುಂಬಿರುವುದಿಲ್ಲ. ಕೆಲವರಿಗೆ ಹೊಟ್ಟೆ ತುಂಬಿ ಉಳಿದರೂ , ಇನ್ನುಳಿದ ಕೆಲ ಮನಸ್ಸುಗಳಿಗೆ ಹೊಟ್ಟೆಗಿಳಿಸೋಕೆ ತುತ್ತು ಸಿಗದಿರೋ ಸ್ಥಿತಿ. ನಮ್ಮ ಮನೆಯ ಬಾಗಿಲು ಹಾಕಿ ಅಪ್ಪ ಹೊರಡುತ್ತಾರೆ. ಕತ್ತಲೆ ಹತ್ತಿರವಾಗುವಾಗ ಅಪ್ಪ ಮನೆ ಬಿಡುತ್ತಾರೆ. ಕತ್ತಲು ದೀರ್ಘವಾದಷ್ಟು ಮನೆಯೊಳಗೆ ತರಕಾರಿ ತುಂಬುತ್ತದೆ, ಶಾಲೆಗೆ ಬೇಕಾದ ಪುಸ್ತಕ ಸಿಗುತ್ತದೆ, ಸಾಂಬಾರು ರುಚಿಯಾಗುತ್ತದೆ. ಹಾಗಾಗಿ ಪ್ರತಿದಿನ ದೇವರಲ್ಲಿ ಬೇಡಿಕೊಳ್ಳುತ್ತೇನೆ " ದೇವರೇ ಕತ್ತಲನ್ನ ಜಾಸ್ತಿ ಮಾಡು. ಬೆಳಕನ್ನ ಕಡಿಮೆ ಮಾಡು. ನನ್ನಪ್ಪ ಹೆಚ್ಚು ದುಡಿದು ಅವರ ಚಿಂತೆ ದೂರವಾಗಲಿ." ಆದರೆ ಪಕ್ಕದ ಮನೆಯ ಹುಡುಗಿಯ ಪ್ರಾರ್ಥನೆಯೇ ಬೇರೆ. ದೇವರೇ ಹಗಲು ಹೆಚ್ಚಾಗಿರಲಿ, ಕತ್ತಲೆ ಕಡಿಮೆಯಾಗಲಿ. ನನ್ನಪ್ಪನಿಗೆ ಹಗಲು ಹೆಚ್ಚಿದ್ದಷ್ಟು ಕೆಲಸಕ್ಕೆ ಸ್ಪೂರ್ತಿ. ದುಡಿಮೆಗೆ ಶಕ್ತಿ. ಹಾಗಾದಾಗ ಮನೆಯೊಳಗೆ ದೀಪ ಉರಿಯುತ್ತದೆ ಓದಿಗೆ ಪುಸ್ತಕ ಕೈಗೆ ಸಿಗುತ್ತದೆ.
ದೇವರ ಮನೆಯ ಮುಂದೆ ಇಬ್ಬರ ಮಾತನ್ನು ಪ್ರೀತಿಯಿಂದ ಆಲಿಸಿದ ಭಗವಂತ ಇಬ್ಬರಿಗೂ ಸಮಾನಾಗಿ ಹಂಚಿದ್ದಾರೆ ದಿನವನ್ನು. ದೇವರು ನೀಡುತ್ತಾನೆ, ಬೇಡಿ ಕೈಮುಗಿದು ನಮ್ಮ ಕಾರ್ಯದಲ್ಲಿ ನಾವು ತೊಡಗಿಕೊಳ್ಳುವುದು ನಿಜವಾದದ್ದು ಅಂತ ನನಗನಿಸುತ್ತದೆ. ನನ್ನ ಗೆಲುವೇ ಸಾಧ್ಯವಾಗಬೇಕು ಅಂತಿಲ್ಲ. ಅವರವರ ಅನಿಸಿಕೆ ಅವರವರದು.
-ಧೀರಜ್ ಬೆಳ್ಳಾರೆ
ಚಿತ್ರ ಕೃಪೆ: ಇಂಟರ್ನೆಟ್ ತಾಣ