ಸ್ಟೇಟಸ್ ಕತೆಗಳು (ಭಾಗ ೨೬೬) - ಬದುಕು

ನಮಗೆ ಕಾಣದ ಕಾಡಿನ ಕತ್ತಲೆಯೊಳಗೆ ಅದೊಂದು ಕುಟುಂಬ ವಾಸ ಮಾಡುತ್ತಿತ್ತು. ನಮಗದು ಕಾಡಿನ ಕತ್ತಲೆ ಅವರಿಗೆ ಜೀವನದ ಬೆಳಕು. ಹಸಿರಿನ ನಡುವೆ ಉಸಿರಾಡುತ್ತಾ, ಹಸಿರು ನೀಡಿದ್ದನ್ನು ತಿನ್ನುತ್ತಾ ತಮ್ಮದೇ ಭಾಷೆಯನ್ನು ಮಾತನಾಡುತ್ತಾ ಬದುಕು ಸಾಗಿಸುತ್ತಾ, ನೆಮ್ಮದಿಯ ಉಸಿರು ಬಿಡುತ್ತಿದ್ದಾರೆ. ಆ ದಿನ ದಾರಿಯಿಲ್ಲದೆ ಕಾಡಿನೊಳಗೆ ಹಾದಿತಪ್ಪಿ ಕೆಲವು ಪರಿಸರವಾದಿಗಳು ನಡೆಯುತ್ತಾರೆ. ಮುಂದೆ ಸಾಗಬೇಕಾದ ದಾರಿಯನ್ನು ತಿಳಿಸುವವರು ಯಾರಿಲ್ಲದೆ ಊಹೆಯಲ್ಲಿ ಹೆಜ್ಜೆ ಇಡುತ್ತಿದ್ದಾರೆ. ಆಗ ಅವರಿಗೆ ಕಂಡವರೇ ನಾಗರಿಕ ಸಮಾಜದ ಗುರುತಿಲ್ಲದ ಹಸಿರನ್ನು ನಂಬಿದ ಜೀವಗಳು. ಸಂವಹನಕ್ಕೆ ಮಾಧ್ಯಮವಿಲ್ಲ. ಮೊಬೈಲ್ ಪೋಟೋ ತೆಗೆಯಿತು. ಹೇಗೋ ಹಸಿರನ್ನ ದಾಟಿ ಕಾಂಕ್ರೀಟ್ ರೋಡಿಗೆ ಹೆಜ್ಜೆಯಿಟ್ಟರು. ಮಾಧ್ಯಮಕ್ಕೆ ಸುದ್ದಿ ಸಿಕ್ಕಿತು. ಸರಕಾರಕ್ಕಿದು ಸಾಧನೆ. ಭೇದಿಸಲಾಗದ ಕಾನನದೊಳಗೆ ರಸ್ತೆ ನಿರ್ಮಾಣವಾಯಿತು. ಮರಗಳ ಹನನವಾಯಿತು . ಕ್ಯಾಮರಾಗಳು ಕಾಡೊಳಗೆ ಓಡಿದವು. ಪ್ರಾಣಿಗಳು ದಿಕ್ಕುತಪ್ಪಿದವು. ಹಸಿರು ಒಣಗಿತು.ಹಸಿರನ್ನು ನಂಬಿದ್ದ ಕುಟುಂಬದ ಉಸಿರು ಕಟ್ಟಿತು. ಸರಕಾರದ ಸಂಶೋಧನೆಗಳು ಆರಂಭವಾದವು.
ಹಸಿರಿನ ಕುಟುಂಬದ ಹಸಿವು ಯಾರಿಗೂ ಕಾಣಲಿಲ್ಲ. ಹಲವರಿದ್ದವರು ಕೆಲವರಾದರು. ಇಷ್ಟು ದಿನ ಅರಿವೆಗೇ ಸಿಗದೆ ನೆಮ್ಮದಿ ಕಂಡವರು ಸುದ್ದಿಯಾಗಿ ನಾಶವಾದರು. ಬದುಕು ಅವರದು ಬದುಕಲಿ ಬಿಡಿ....
-ಧೀರಜ್ ಬೆಳ್ಳಾರೆ
ಚಿತ್ರ ಕೃಪೆ: ಇಂಟರ್ನೆಟ್ ತಾಣ