ಸ್ಟೇಟಸ್ ಕತೆಗಳು (ಭಾಗ ೨೬೭) - ವೈರಸ್

ಸ್ಟೇಟಸ್ ಕತೆಗಳು (ಭಾಗ ೨೬೭) - ವೈರಸ್

ಸಭೆ ಆರಂಭವಾಗಿ ಕೆಲವು ಗಂಟೆಗಳು ದಾಟಿರಬೇಕು. ಮಾತುಕತೆಗಳು ತುಂಬಾ ನಡೆದಿದ್ದು ಎಲ್ಲೆಲ್ಲೂ ಯುವಕರ ಮಾತುಗಳೇ ಜೋರು ಸ್ವರದಲ್ಲಿ ಕೇಳುತ್ತಿದ್ದವು. ಅಷ್ಟರವರೆಗೆ ಸುಮ್ಮನೆ ಕುಳಿತಿದ್ದ ಹಿರಿಯರೊಬ್ಬರು ಮಾತಾರಂಭಿಸಿದರು,  "ನಿಮ್ಮದು ಬಿಸಿರಕ್ತ, ನಿಮಗಿಷ್ಟ ಬಂದ ಹಾಗೆ ಬದುಕಿದರೆ ಆದರೆ ಬದುಕಲ್ಲ. 

ನಮ್ಮನ್ನ ಒಂದೊಂದು ಹೆಸರಿನಿಂದ ಒಬ್ಬೊಬ್ರು ಕರೆಯುತ್ತಾರೆ. ಆದರೆ ನಮ್ಮ ಮೂಲಸ್ವರೂಪ ವೈರಸ್. ನಮ್ಮ ಕೆಲಸ ದೇಹದ ಉಷ್ಣತೆಯನ್ನು ಬದಲಿಸುವುದು ರೋಗಗಳನ್ನು ತರೋದು. ಇವುಗಳನ್ನು ಮಾಡುತ್ತಾ ನಾವು ಬದುಕಬೇಕು .ಅದು ಬಿಟ್ಟು ನಮ್ಮ ಬದುಕಿಗೆ ಆಶ್ರಯವಾದ ದೇಹವನ್ನ ಸಾಯಿಸಿ ನಮ್ಮನ್ನು ಸಾಯಿಸಿ ಕೊಳ್ಳೋದು ಆತ್ಮಹತ್ಯೆಯಂತಹ ಪಾಪದ ಕೆಲಸ. ಹಾಗಾಗಿ ನಮ್ಮ ಜೀವವು ಉಳಿಬೇಕು ಅನ್ನೋದಾದ್ರೆ ನಾವು ವಾಸಿಸುವ ದೇಹವು ಬದುಕಬೇಕು. ಹಾಗಾಗಿ ಪ್ರಭಾವ ಎಷ್ಟು ಬೀರಬೇಕು ಅನ್ನೋದರ ಅರಿವು ನಮಗಿರಬೇಕು. ಹಾಗೆ ಬದುಕ್ಬೇಕು ಇಲ್ಲದಿದ್ದರೆ ನಮ್ಮ ಬದುಕಿಗೆ ಅರ್ಥವಿರೋದಿಲ್ಲ. ಯುವ ಮನಸ್ಸುಗಳಾದ ನೀವು ಭಾರೀ ಪ್ರಭಾವ ಬೀರಲು ಪ್ರಯತ್ನಿಸುತ್ತೀರಿ. ಆದರೆ ಅದು ನಿಜದ ಬದುಕಲ್ಲ. ನಮ್ಮ ತಡೆಗೆ ವಿರೋಧಗಳನ್ನ ಕಂಡು ಹಿಡಿಯುತ್ತಾರೆ. ಆಗ ವೇಷ ಬದಲಿಸಬೇಕು. ಇದನ್ನು ಅರಿತುಕೊಂಡು  ನಾವು ಬದುಕೋಣ ನಾವು ಬದುಕಿರುವ ದೇಹವನ್ನು ಬದುಕಿಸೋಣ ಇಷ್ಟೇ ನಮ್ಮ ಜೀವನ. ಕಣ್ಣಿಗೆ ಕಾಣದಿದ್ದರೂ ಪ್ರಭಾವದಲ್ಲಿ ನಮ್ಮ ಇರುವಿಕೆಯನ್ನು ತೋರಿಸಿಕೊಳ್ಳುವ .ಶುಭವಾಗಲಿ ಗೆಲುವು ನಮ್ಮದಾಗಲಿ ". ಸಭೆ ಮುಕ್ತಾಯವಾಯಿತು. ಊರಲ್ಲಿ ಶೀತ ಕೆಮ್ಮು ಜ್ವರಗಳ ಹಾವಳಿ ಹೆಚ್ಚಾಯಿತು.

-ಧೀರಜ್ ಬೆಳ್ಳಾರೆ

ಚಿತ್ರ ಕೃಪೆ: ಇಂಟರ್ನೆಟ್ ತಾಣ