ಸ್ಟೇಟಸ್ ಕತೆಗಳು (ಭಾಗ ೨೭೦) - ಆ ಕಣ್ಣು
ಇವತ್ತು ಮೌನದ ಕಣ್ಣಲ್ಲಿ ಇಣುಕಿದಾಗ ನನ್ನ ಕಣ್ಣು ತಪ್ಪಿಗಾಗಿ ಕಣ್ಣೀರು ಸುರಿಸಿತು. ಅವತ್ತು ಕುಟುಂಬದ ಬಂಧುಗಳನ್ನು ಜೊತೆ ಸೇರಿಸಲು ದೈವಗಳು ಕರೆ ನೀಡಿದ್ದವು. ಅಲ್ಲಿ ಕೈಮುಗಿದು ನಿಂತೆವು. ಅನ್ನ, ಅವಲಕ್ಕಿ, ಬಾಳೆಹಣ್ಣು, ದೈವಗಳಿಗೆ ಬಡಿಸಿಯಾಗಿತ್ತು. ಕೋಳಿ ಬಲಿಯೊಂದು ಕೊಡಬೇಕಿತ್ತು. ಕೋಳಿಯನ್ನು ನನ್ನ ಕೈಯಲ್ಲಿ ಹಿಡಿಯಲು ಕೊಟ್ಟರು. ಎದೆ ಹತ್ತಿರ ಅವುಚಿ ಹಿಡಿದಿದ್ದೆ. ಅದರ ಪುಟ್ಟ ಎದೆಗೂಡಿನ ಮೃದು ನಾದ ನನ್ನ ಎದೆಯಾ ತಂತಿಯನ್ನು ಸ್ಪರ್ಶಿಸಿತು. ಪಿಳಿಪಿಳಿ ಕಣ್ಣುಬಿಡುತ್ತಾ ಮುಂದಿನ ಕ್ಷಣದ ಅರಿವಿಲ್ಲದೆ ನನ್ನ ಮುಖವನ್ನು ಮುದ್ದಿನಿಂದ ಗಮನಿಸಿತು. ಅದರ ಮೌನ ನನ್ನೊಳಗೆ ಸಣ್ಣ ಕಂಪನವನ್ನು ಸೃಷ್ಟಿಸಿತು. ಕೋಳಿಯ ಸಾವನ್ನು ದೇವರು ಮೆಚ್ಚುತ್ತಾನೆಯೇ ಪ್ರಶ್ನೆ ಹುಟ್ಟಿದ ಕ್ಷಣದಲ್ಲಿ ನನ್ನ ಕೈಯಿಂದ ಕೋಳಿ ಕಸಿಯಲ್ಪಟ್ಟಿತು. ಅದರ ದೇಹ ತಲೆಯಿಲ್ಲದೆ ಅಂಗಳದಲ್ಲಿ ಉರುಳಾಡುತ್ತಿದ್ದಾಗ ದೇಹ ಮಾತಾಡಿತು." ಲೋ ಮನುಷ್ಯ ನಿನಗೆ ನಾನು ತುಂಬ ಸುಲಭವಾಗಿ ಸಿಕ್ತಾ ಇದ್ದೇನೆ, ನನ್ನಿಂದ ಯಾವುದೇ ತೊಂದರೆ ಇಲ್ಲ ಅದಕ್ಕಾಗಿ ನನ್ನ ಪ್ರಾಣ ಬಲಿಯಾಗುತ್ತಿದೆ. ನಾನು ಕ್ರೂರಿಯಾಗಿದ್ದರೆ, ನಿನ್ನ ಕೈಗೆ ಸಿಗದಿದ್ದರೆ ನಾನು ಆರಾಮವಾಗಿ ಬದುಕುತ್ತಿದೆ. ನನ್ನ ಸಾವಿನಿಂದ ಅದೇನು ಪುಣ್ಯ ಸಿಗುತ್ತೆ? ನಿನ್ನ ಜೀವನವು ಹೀಗೆ ಒಂದು ದಿನ ಆಗುತ್ತೆ.. ಕಾಯಿ... ಸ್ಥಬ್ದವಾಯಿತು ದೇಹ. ನನ್ನ ಮನಸ್ಸು ಕೂಡ. ಕಣ್ಣೀರು ಇಳಿಯುತ್ತಿತ್ತು. ಊಟ ಸೇರಲಿಲ್ಲ. ಮುಗ್ಧ ಕಣ್ಣುಗಳು ನನ್ನ ಕಣ್ಣೊಳಗೆ ತನ್ನ ಬಿಂಬವನ್ನು ಹುಟ್ಟಿಸಿತ್ತು.
-ಧೀರಜ್ ಬೆಳ್ಳಾರೆ
ಚಿತ್ರ ಕೃಪೆ: ಇಂಟರ್ನೆಟ್ ತಾಣ