ಸ್ಟೇಟಸ್ ಕತೆಗಳು (ಭಾಗ ೨೭೧) - ಪಾದ
ನಾನು ಅವತ್ತು ಮನೆಯಲ್ಲಿ ಇರಲಿಲ್ಲ ಹಾಗಾಗಿ ದೇವರ ಮನೆಯನ್ನು ನಮ್ಮ ಮನೆಯ ಬೇಲಿಯ ಹೂವುಗಳು ಅಲಂಕರಿಸಿಲ್ಲ. ಪ್ರತಿದಿನವೂ ದೇವರ ಪಾದದ ಅಡಿಯಲ್ಲಿ ಕುಳಿತು ಜೀವನವನ್ನು ಸಾರ್ಥಕ್ಯ ಮಾಡಿಕೊಳ್ಳುವ ಅವಕಾಶವನ್ನ ಕಳೆದುಕೊಂಡೆವಲ್ಲಾ ಎನ್ನುವ ನೋವು ಕಾಡುತ್ತಿರಬಹುದು ಎಂದು ಮರುದಿನ ಮುಂಜಾನೆ ಎದ್ದು ಸ್ನಾನ ಮುಗಿಸಿ ಹೂವು ಕೊಯ್ಯುವಾಗ ಗಿಡದ ಬಳಿಯಲ್ಲಿ ಒಂದು ಕ್ಷಣ ಮಾತಾಡಿದೆ ,"ನಿನ್ನೆ ಒಂದು ದಿನ ಬರೋದಕ್ಕೆ ಆಗಿಲ್ಲ, ದಯವಿಟ್ಟು ಕ್ಷಮಿಸು. ಪ್ರತಿದಿನವೂ ಭಗವಂತನ ಸಾಮಿಪ್ಯ ಸೇರುತ್ತಿದ್ದ ನಿನ್ನನ್ನ ದೂರಮಾಡಿದೆ. ಇನ್ಯಾವತ್ತು ಹೀಗೆ ಮಾಡುವುದಿಲ್ಲ".
" ಅಲ್ಲಾ ಮಾರಾಯ ನಿನ್ನ ಹತ್ತಿರ ನಾವು ಯಾವಾಗ ಹೇಳಿದ್ವಿ ನಾವು ಭಗವಂತನ ಸಾಮಿಪ್ಯ ಇಲ್ಲ ಅಂತ. ಇಡೀ ಜಗತ್ತು ಪೂರ್ತಿ ದೇವರ ಆವಾಸಸ್ಥಾನ. ನಾವು ಅರಳುತ್ತಿರುವ ಜಾಗ ಅದು ದೇವನ ಕಿರೀಟ. ನಾವು ಮುದುಡಿ ನೆಲಕ್ಕೆ ಬಿದ್ದರೆ ಅದು ದೇವನ ಪಾದ. ಹಾಗಾಗಿ ದಿನವೂ ಕಿರೀಟವನ್ನು ಸೇರುತ್ತೇವೆ ಪಾದವನ್ನು ಒಪ್ಪುತ್ತೇವೆ ಹೀಗಿರುವಾಗ ಬೇಸರವೇಕೆ ನಮಗೆ. ನೀವು ನಂಬೋದು ಅಲ್ಲಿ, ನಾವು ನಂಬೋದು ನನಗೆ ನೀರು-ಗೊಬ್ಬರ ನೀಡಿದ ಈ ನೆಲದ ದೇವರನ್ನು". ನಗುತ್ತಾ ಹೂವರಳಿಸಿತು. ಆ ಕ್ಷಣ ತಲೆ ತಗ್ಗಿಸಿದವ ತಲೆಯೆತ್ತುವ ಮನಸ್ಸು ಮಾಡಲಿಲ್ಲ. ನಾನು ಹೂವು ಕೊಯ್ಯಲ್ಲಿಲ್ಲ. ಫೋಟೋದಲ್ಲೂ ದೇವರು ನಗುತ್ತಿದ್ದ.
-ಧೀರಜ್ ಬೆಳ್ಳಾರೆ