ಸ್ಟೇಟಸ್ ಕತೆಗಳು (ಭಾಗ ೨೭೨) - ಅಜ್ಜ-ಮಗು
ರಸ್ತೆಯೊಂದರ ಬದಿ. ಏರುತಗ್ಗುಗಳನ್ನು ಜೀವಂತವಾಗಿ ಹೊತ್ತಿರುವ ಪಾದಾಚಾರಿ ರಸ್ತೆ. ರಸ್ತೆಗಳು ಹೊಸತಾದರೂ ದಾರಿಗಳು ಹಾಗೆಯೇ ಉಳಿದಿದೆ. ಇದಕ್ಕೆ ಕಾಯಕಲ್ಪವಿಲ್ಲ. ಅಲ್ಲಿ ಹೆಜ್ಜೆ ಹಾಕುತ್ತಿದ್ದಾರೆ ಅವರು. ವಯಸ್ಸು ಅಜಗಜಾಂತರ. ಆದರೆ ಮನಸ್ಸು ಒಂದೇ. ಒಬ್ಬರು ಅನುಭವಗಳ ಜೊತೆ ವಯಸ್ಸಾಗಿ ಮಗುವಿನಂತಾಗಿದ್ದರೆ, ಇನ್ನೊಬ್ಬರು ಅನುಭವಗಳ ಆಸ್ವಾದಿಸಲು ಮಗುವಾಗಿದ್ದರೆ. ಪುಟ್ಟ ಹೆಜ್ಜೆಯ ನಾಲ್ಕು ಪದಗಳು ನಡೆಯುತ್ತಿವೆ .ಎರಡು ಹೆಜ್ಜೆ ಗುರುತುಗಳು ನೆನಪುಗಳ ಹೊತ್ತು ನೆರಿಗೆಗಳಾಗಿ ಮೂಡಿದರೆ, ಇನ್ನೆರಡು ಕೌತುಕಗಳನ್ನು ಅನುಭವಿಸಲು ಆಸೆಯಿಂದ ಮೃದುವಾಗಿದೆ. ಪುಟ್ಟ ಕೈ ಮೃದು ಕೈಯನ್ನ ಹಿಡಿದಿದೆ. ಎರಡೂ ಕಡೆ ಕುತೂಹಲದ ಮುಖ, ನಗುವಿನ ಸಿಂಚನ, ಪ್ರಶ್ನೆಗಳನ್ನು ಹೊತ್ತು ಬದುಕಿನೊಂದಿಗೆ ನಡೆಯುತ್ತಿದ್ದಾರೆ. ಹೆಜ್ಜೆಗಳು ಭಾರವಾಗಿದೆ ಒಬ್ಬರಿಗೆ ಅನುಭವಗಳು ಹೆಚ್ಚಾಗಿ, ಇನ್ನೊಬ್ಬರಿಗೆ ಅಭ್ಯಾಸ ಹೊಸದಾಗಿ. ಒಬ್ಬರದು ಮಣ್ಣಿನೆಡೆಗೆ, ಇನ್ನೊಬ್ಬರು ಬದುಕಿನೆಡೆಗೆ ಪಯಣ. ಬಾಗಿದ ಮರ ಉದುರಲೇಬೇಕು, ಚಿಗುರುವ ಮರ ಅರಳಲೇಬೇಕು. ಹೆಜ್ಜೆ ಹಾಕುತ್ತಿವೆ ಮನಸ್ಸುಗಳು. ಒಬ್ಬರಿಗೊಬ್ಬರು ಆಸರೆಯಾಗಿ ಹೆಜ್ಜೆ ಹಾಕುತ್ತಿವೆ. ಮನಸ್ಸುಗಳನ್ನು ದೂರದಿಂದ ನಿಂತು ನೋಡಿ ಆನಂದಿಸಿ ಬೇಕು. ಬದುಕೊಂದರ ಆರಂಭ, ಬದುಕೊಂದರ ಅಂತ್ಯದ ಸನ್ನಿವೇಶಗಳು ಎರಡೂ ಕಣ್ಣ ಮುಂದೆ ಬಂದವು. ಬದುಕು ಸುಂದರಗೊಳಿಸಿದ ಭಗವಂತನಿಗೆ ನಮನ ಸಲ್ಲಿಸಿ ನಾನು ಹೆಜ್ಜೆ ಹಾಕಿದೆ…
-ಧೀರಜ್ ಬೆಳ್ಳಾರೆ
ಚಿತ್ರ ಕೃಪೆ: ಇಂಟರ್ನೆಟ್ ತಾಣ