ಸ್ಟೇಟಸ್ ಕತೆಗಳು (ಭಾಗ ೨೭೩) - ಕೊಳಲು
ಕೊಳಲುಗಳು ಹಾಗೆ ಉಳಿದಿವೆ. ಖರೀದಿಸುವರು ಇಲ್ಲವಾದರೆ ಮತ್ತೇನು ಮಾಡೋಕೆ ಸಾಧ್ಯ. ನಮ್ಮಪ್ಪ ನನ್ನನ್ನು ಜಾತ್ರೆಗೆ ಕರೆದುಕೊಂಡು ಹೋಗಿ ಅವರ ಪಕ್ಕ ನಿಲ್ಲಿಸಿಕೊಂಡು ಬೇರೆ ಬೇರೆ ತರದ ಹಾಡುಗಳನ್ನು ನುಡಿಸಿ ಕೊಳಲು ಮಾರಾಟ ಮಾಡುತ್ತಿದ್ದ. ಸುಮ್ಮನೆ ನಿಂತು ನೋಡುತ್ತಿದ್ದೆ. ಅಪ್ಪನಿಗೆ ಗೊತ್ತಿರುವ ಕೆಲವು ಹಾಡುಗಳಿಂದ ಜನರನ್ನು ಎಷ್ಟು ಮೋಡಿ ಮಾಡುತ್ತಾನಲ್ಲ !.ನನಗೆ ಸ್ವಲ್ಪ ದಿನದಲ್ಲಿ ಮತ್ತದೇ ಹಾಡುಗಳನ್ನು ಕೇಳಿ ಕೇಳಿ ರೋಸಿಹೋಗಿತ್ತು. ಒಂದು ದಿನ ರಾತ್ರಿ ಬೆಳಗಾದಾಗ ಅಪ್ಪ ಕೊಳಲು ನುಡಿಸಲಿಲ್ಲ. ಶಾಶ್ವತವಾಗಿ ದೇವರೊಂದಿಗೆ ಸಂಗೀತ ಕಛೇರಿ ನಡೆಸಲು ಹೊರಟೇ ಬಿಟ್ಟಿದ್ದರು. ಮನೆಯ ಬಾಗಿಲುಗಳು, ನಿಂತಿರುವ ಗೋಡೆಗಳು ,ಅಡುಗೆಕೋಣೆಯ ಪಾತ್ರೆಗಳು, ನನ್ನನ್ನೇ ನಂಬಿದ್ದು ಹಾಗಾಗಿ ನಾನು ಕೆಲಸಕ್ಕೆ ಹೋಗಲೇಬೇಕಿತ್ತು. ಕೊಳಲು ನನ್ನ ಕೈಹಿಡಿಯಬಹುದೇ ಎಂದು ನಂಬಿ ಜಾತ್ರೆಗೆ ಹೊರಟೆ. ಜಾತ್ರೆ ಸಂತೆಗಳು ಹಲವಾದರೂ ಕೊಳಲು ನನ್ನಿಂದ ಒಳ್ಳೆಯ ಹಾಡನ್ನು ನುಡಿಸಲೇ ಇಲ್ಲ. ಅಪ್ಪನ ಉಳಿತಾಯದ ಹಣ ಮನೆಯಲ್ಲಿ ಖಾಲಿಯಾದಾಗ ಹಸಿವು ಹೆಚ್ಚಾಯಿತು. ಉಪವಾಸವಿದ್ದವನಿಗೆ ಆ ದಿನ ಸಂತೆಯ ಮಧ್ಯದಲ್ಲಿ ಹಸಿವಿನ ಹಾಡು ಹೊರಬಂತು. ಕೊಳಲು ತುಂಬಾ ಸುಂದರವಾಗಿ ನುಡಿಯಿತು. ಕೇಳುಗನಿಗೆ ಇಂಪಾಗಿ ಕೊಳಲುಗಳು ಮಾರಾಟವಾದವು. ಅಲ್ಲಿಂದ ಜಾತ್ರೆ ಸಂತೆಗಳ ಹುಡುಕಾಟ ಆರಂಭವಾಗಿ ಮನೆಯ ಹಸಿವು ಕಡಿಮೆಯಾಯಿತು. ಸರಕಾರ ಜನ ಸೇರೋದಕ್ಕೆ ನಿರ್ಬಂಧಿಸಿದ್ದರು. ಕೊಳಲು ಮನೆಯಲ್ಲಿ ಉಳಿಯಿತು. ಹಸಿವು ತನ್ನದೇ ಹಾಡುಗಳನ್ನು ನುಡಿಸುತ್ತಿತ್ತು. ಅಮ್ಮ-ಅಪ್ಪನ ಊರಿಗೆ ಹೊರಟರು. ನಾನು ಏಕಾಂಗಿಯಾಗಿದ್ದೆ. ಕೊಳಲು ಎಷ್ಟೇ ಬಾರಿಸಿದರು ಹೊಟ್ಟೆ ಹಸಿವು ಕಡಿಮೆಯಾಗುತ್ತಿಲ್ಲ. ಅಪ್ಪ ನನಗೆ ಹೇಳಿ ಕೊಡಬೇಕಿತ್ತು, ಹಸಿವು ಕಡಿಮೆಯಾಗುವ ನಾದವನ್ನ…
-ಧೀರಜ್ ಬೆಳ್ಳಾರೆ
ಚಿತ್ರ ಕೃಪೆ: ಇಂಟರ್ನೆಟ್ ತಾಣ