ಸ್ಟೇಟಸ್ ಕತೆಗಳು (ಭಾಗ ೨೭೪) - ಮಾತಾಡಿದ ಹಸಿವು
ಊರು ಬಿಟ್ಟು ಬರುವವರಿಗೆ, ಇನ್ನೊಂದೂರಿಗೆ ಹೊರಡೋರಿಗೆ ಇದೊಂದೇ ನಿಲ್ದಾಣ. ಬಸ್ಸುಗಳು ಈ ಅಂಗಳದಿಂದ ಹಲವು ಊರುಗಳಿಗೆ ಚಲಿಸುತ್ತವೆ. ಹಲವು ಊರುಗಳ ನೆಲಗಳಿಂದ ಈ ಅಂಗಳಕ್ಕೆ ಬಂದು ನಿಲ್ಲುತ್ತದೆ. ಇಲ್ಲಿ ಹಸಿವಿನಿಂದ ಆಗಮಿಸುವರು, ಹೊಟ್ಟೆ ತುಂಬಿಸಿಕೊಂಡು ಊರಿನ ದಾರಿ ಹಿಡಿಯುತ್ತಾರೆ. ಕೆಲವರು ಇನ್ನೂ ದೊಡ್ಡ ಹಸಿವುಗಳನ್ನು ನೀಗಿಸಿಕೊಳ್ಳಲು ದೊಡ್ಡ ಊರುಗಳಿಗೆ ಹೊರಡುತ್ತಾರೆ. ಹೀಗೆ ಮಾತುಕತೆಗಳು, ಜಗಳಗಳು, ಪ್ರೀತಿ, ಕೋಪ, ಮುನಿಸು ಎಲ್ಲ ಭಾವನೆಗಳು ಇಲ್ಲಿ ಸಮ್ಮಿಳಿತವಾಗಿ ಅದರದರ ದಾರಿ ಹಿಡಿಯುತ್ತದೆ. ಇಂದು ಎಂದಿನಂತೆ ಎಲ್ಲಾ ಅಂಗಡಿಗಳಲ್ಲಿ ಬಣ್ಣಬಣ್ಣದ ತಿಂಡಿ ಪೊಟ್ಟಣಗಳನ್ನು ನೇತಾಡಿಸಿ ದೂರದೂರುಗಳ ಕಿಟಕಿ ಪಕ್ಕದ ಪಯಣಕ್ಕೆ ಅನುಕೂಲವಾಗಲು ಕಾಲಕ್ಷೇಪಕ್ಕೆ ನಾಲಿಗೆ ರುಚಿಗೆ ನೇತಾಡಿಸಿದ್ದಾರೆ. ಅವಳು ಮುಂಜಾನೆಯಿಂದ ಬರಿಯ ಓಡಾಟವನ್ನೇ ನಡೆಸಿದ್ದಾಳೆ. ಯಾವ ಬಸ್ಸನ್ನು ಏರುತ್ತಿಲ್ಲ. ಯಾರ ಬಳಿಯೂ ಕೈ ಚಾಚುತ್ತಿಲ್ಲ. ಕೈಚಾಚಲು ಮುಜುಗರವೇನೋ ಅನ್ನಿಸುತ್ತಿದೆ. ವಯಸ್ಸು ಎಂಟರಿಂದ ಹತ್ತಿರಬಹುದು. ಬಟ್ಟೆ ಕೊಳೆಯಾಗಿದೆ. ಆದರೆ ಪ್ರತಿಸಲವೂ ಆ ನಿಲ್ದಾಣದ ಕೊನೆಯ ಗೋಡೆಯ ಪಕ್ಕಕ್ಕೆ ಹೋಗಿ ಇಣುಕಿ ನೋಡಿ ಮತ್ತು ಓಡಿ ಬರುತ್ತಿದ್ದಾಳೆ. ಈ ಸನ್ನಿವೇಶ ಪುನರಾವರ್ತನೆಯಾಗುತ್ತಿದೆ. ಮಧ್ಯಾಹ್ನದ ಹೊತ್ತು ಜನರ ಓಡಾಟ ಕಡಿಮೆಯಾಯಿತು. ಬಸ್ಸುಗಳು ಒಂದಷ್ಟು ವಿಶ್ರಾಂತಿಯನ್ನು ಬಯಸಿದ್ದವು. ಬಿಸಿಲು ಮಾತನಾಡುತ್ತಿದ್ದ ಕಾರಣ ಜನ ಮೌನವಾಗಿದ್ದರು. ಅಂಗಡಿಯವ ಸಣ್ಣ ನಿದ್ದೆಗೆ ಜಾರಿದ್ದ. ನಿಧಾನಕ್ಕೆ ಆಗಮಿಸಿದ ಅವಳು ಗೋಡೆಯ ಬದಿಯಿಂದಲೇ ಬಂದು ನೇತಾಡಿಸಿದ ತಿಂಡಿಯ ಪಟ್ಟಣದಲ್ಲಿ ಎರಡು ಪೊಟ್ಟಣವನ್ನು ಬಿಸಿಲಿಗೂ ಗಾಳಿಗೂ ಶಬ್ದ ಕೇಳದಂತೆ ಹರಿದು ಮೆಲ್ಲನೆ ಹೆಜ್ಜೆಗಳನ್ನ ಅಲ್ಲಿಂದ ಕಿತ್ತು ಮೋಟುಗೋಡೆಯ ಬಳಿ ಓಡಿದಳು. ಹಸಿವು ಈ ಕೆಲಸವನ್ನು ಮಾಡಿದ್ದು, ನಾನು ಬರೀ ಪ್ರೇಕ್ಷಕನಾಗಿ ನಿಂತೆ.ಮೋಟುಗೋಡೆಯಾಚೆ ಇರೋರು ಯಾರು ಅನ್ನೋದು ನನ್ನ ಅರಿವಿಗೆ ಬರಲಿಲ್ಲ.ಇದು ಇಂದು ನಾನು ಕಂಡ ಹಸಿವಿನ ಒಂದು ಮುಖ. ಇಂತಹ ಹಲವು ಹಸಿವಿನ ಮುಖಗಳು ದಿನವೂ ಎದುರಾಗುತ್ತವೆ .ಒಂದೊಂದು ಮನಸ್ಸಿನ ಬಾಗಿಲು ತಟ್ಟಿದರೆ ಕೆಲವು ಹಾಗೆಯೇ ದಾಟಿ ಹೋಗುತ್ತವೆ. ಎಲ್ಲಾ ಹಸಿವುಗಳು ಮಾತಾಡುತ್ತವೆ. ಕೇಳಲು ಮನಸ್ಸಿರಬೇಕಷ್ಟೆ…
-ಧೀರಜ್ ಬೆಳ್ಳಾರೆ
ಚಿತ್ರ ಕೃಪೆ: ಇಂಟರ್ನೆಟ್ ತಾಣ