ಸ್ಟೇಟಸ್ ಕತೆಗಳು (ಭಾಗ ೨೭೬) - ರಾಕ್ಷಸ

ಸ್ಟೇಟಸ್ ಕತೆಗಳು (ಭಾಗ ೨೭೬) - ರಾಕ್ಷಸ

ನಾನು ಪ್ರತಿದಿನ ದೇವರಿಗೆ ಕೈ ಮುಗಿಯುತ್ತೇನೆ. ನನ್ನನ್ನು ತುಂಬ ಜನ ಗೌರವಿಸುತ್ತಾರೆ. ನಾನು ತುಂಬಾ ಒಳ್ಳೆಯವನಂತೆ ಹೀಗಂತ ಜನ ಮಾತಾಡುತ್ತಾರೆ. ಆದರೆ ನನಗನ್ನಿಸುವುದು ನನ್ನೊಳಗೊಬ್ಬ ರಾಕ್ಷಸ ಹುಟ್ಟಿಕೊಂಡದ್ದು ಯಾವಾಗ ಅಥವಾ ನಾನು ನನ್ನೊಳಗಿನ ರಾಕ್ಷಸನನ್ನ ಸಂಹಾರ ಮಾಡ್ಲಿಲ್ವಾ? ಅಂತ. ಯಾಕಂದ್ರೆ ನಾನು ಸಣ್ಣದಾಗಿರುವಾಗಿನಿಂದ  ಇಂದಿನವರೆಗೂ ನನ್ನ ಅಭ್ಯಾಸ ಒಂದೇ ನನ್ನದೇ ಕೈಬೆರಳಿನ ಉಗುರುಗಳನ್ನು ನಾನೇ ಕಚ್ಚುತ್ತೇನೆ. ಜೊತೆಗೆ ಯಾವುದೇ ವಸ್ತು ಸಿಕ್ಕರೂ ಅದರ ಬಳಕೆಯ ದಾರಿ ಅದಲ್ಲದಿದ್ದರೂ  ಅದನ್ನ ಯಾವುದೋ ರೀತಿಯಲ್ಲಿ ಬಳಸುತ್ತೇನೆ. ಕೈಗೊಂದು ಕೋಲು ಸಿಕ್ಕರೆ ಸಿಕ್ಕಿದಲ್ಲಿಗೆಲ್ಲ ಬಡಿಯುತ್ತಾ, ಯಾವುದೋ ಬೆಳೆದು ನಿಂತಿರುವ ಹುಲ್ಲನ್ನು ಬಿಸಿಬಿಸಿ ಕತ್ತರಿಸುತ್ತಾ, ಹೀಗೆ ಸಾಗುತ್ತೇನೆ. ಕತ್ತರಿ ಆದರೆ ಸುಮ್ಮನೆ ಸಂಬಂಧವೇ ಇಲ್ಲದ್ದನ್ನ ಕತ್ತರಿಸುತ್ತೇನೆ. ಕೈಗೊಂದು ಸಿಗುವ ಸಣ್ಣ ಪತ್ರಿಕೆಯ ತುಂಡನ್ನಾದರೂ ಕತ್ತರಿಸಿ ಕತ್ತರಿಸಿ ಅದೇನೋ ಖುಷಿಪಡುತ್ತೇನೆ. ಚೂಪಿನದ್ದೇನಾದರೂ ಸಿಕ್ಕರೆ ಚುಚ್ಚುತ್ತೇನೆ. ಹರಿತವಾದರೆ ಕೊಯ್ಯತ್ತೇನೆ. ಪ್ರತಿಯೊಂದು ಕಡೆಗೂ ನಾನು ಅಗತ್ಯವಿಲ್ಲದ ಕೆಲಸವನ್ನು ಮಾಡುತ್ತಾ ಬಂದಿದ್ದೇನೆ. ಇದ್ಯಾವುದು ನನ್ನೊಳಗಿನ ಒಳ್ಳೆಯತನದ ಕೆಲಸವಲ್ಲ. ಅದು ರಾಕ್ಷಸನ ಕೆಲಸ. ಈ ರಾಕ್ಷಸ ಹುಟ್ಟಿಕೊಂಡದ್ದು ಯಾವಾಗ ಅಥವಾ ನಾನು ಅವನನ್ನು ಹೊರಗೆ ಹಾಕ್ಲಿಲ್ವಾ ಅಂತ ಕಾಣುತ್ತೆ. ನನಗೆ ಭಯ ಇಷ್ಟೇ ಈ ರಾಕ್ಷಸ ಇನ್ನೂ ಬೆಳೆದು ನಿಂತು ಬಿಟ್ಟರೆ ಏನೇನು ಕೆಲಸ ಮಾಡಬಹುದು. ಅದಕ್ಕೆ ಕೈ ಮುಗಿತಾ ದೇವರಲ್ಲಿ ಕೇಳಿಕೊಳ್ಳುವುದಿಷ್ಟೆ" ದೇವರೇ ಯಾವ್ಯಾವುದೋ ರಾಕ್ಷಸರ ಸಂಹಾರ ಮಾಡಲಿಕ್ಕೆ ಏನೇನೋ ರೂಪವನ್ನು ಎತ್ತುತ್ತಿರುವ ನೀನು ನನ್ನೊಳಗಿನ ರಾಕ್ಷಸನನ್ನು ಸಂಹಾರ ಮಾಡಕ್ಕೆ ಯಾವುದಾದರೂ ಒಂದು ರೂಪದಿಂದ ಬಂದು ಬಿಡಪ್ಪ, ಯಾಕೆಂದರೆ ನನಗೆ ಭಯ ಆಗ್ತಾ ಇದೆ" ದೀಪ ಹಚ್ಚಿದೆ. ಸಣ್ಣದಾಗಿ ಕೇಳಿದ ಓಂಕಾರನಾದ ಅವನು ಬರುವ ಸೂಚನೆಯನ್ನು ಕೊಡಲಾರಂಭಿಸಿತು.

-ಧೀರಜ್ ಬೆಳ್ಳಾರೆ

ಚಿತ್ರ ಕೃಪೆ: ಇಂಟರ್ನೆಟ್ ತಾಣ