ಸ್ಟೇಟಸ್ ಕತೆಗಳು (ಭಾಗ ೨೭೭) - ಸಾಗುವ ದಾರಿ
ಮುಂದಿನ ದಾರಿ ಗೊತ್ತಿಲ್ಲ. ಗುರುತು ಪರಿಚಯವಿಲ್ಲ. ಯಾರೋ ಈ ದಾರಿಯಲ್ಲಿ ಸಾಗಿದ್ದರಿಂದ ಅವರಿಗೆ ಬದುಕಲು ಜಾಗ ಸಿಕ್ಕಿದೆಯಂತೆ. ಹಾಗಾಗಿ ನಾನೂ ದಾರಿ ಹಿಡಿದಿದ್ದೇನೆ. ದಾರಿಯಲ್ಲಿ ಸಿಕ್ಕ ಹಲವು ಜನ ನೀನ್ಯಾಕೆ ಈ ದಾರಿ ಹಿಡಿದಿದ್ದೀಯಾ? ಅದೇ ಹಳೇ ದಾರಿಯಲ್ಲಿ ಹೋಗಬಹುದಿತ್ತಲ್ಲ ಅಂದರು. ಇನ್ನೂ ಕೆಲವರು ಒಳ್ಳೆಯದಾಗುತ್ತೆ ಇಲ್ಲೇ ಸಾಗು ಎಂದರು. ನಾನು ನನ್ನನ್ನೇ ನಂಬಿಕೊಂಡು ಗುರುತಿಲ್ಲದ ದಾರಿಯಲ್ಲಿ ನನ್ನದೇ ಹೆಜ್ಜೆಗಳು ಬಲವಾಗಿ ಊರಿ ನಡೆದೆ. ಹಿಂದೆ ಬರುವವರಿಗೆ ಸ್ವಲ್ಪವಾದರೂ ಕಾಣಲಿ ಅನ್ನುವ ಆಶಯ ನನ್ನದಾಗಿತ್ತು .ಹಾಗೆ ಸಾಗುತ್ತಿರುವಾಗಲೇ ನೋಡಬಾರದ ದೃಶ್ಯಗಳು ಕಂಡವು.
ಕೆಲವು ಅಲ್ಲೇ ನಿಂತು ನನ್ನನ್ನೇ ನೋಡು ಅಂತ ಕರೆದವು. ಕಾಲಿಗೆ ಅಡ್ಡ ಸಿಗುವ ಬೇರುಗಳು, ಮೈಗೆ ಒರಸಿ, ಚುಚ್ಚಿ ರಕ್ತ ಬರಿಸುವ ಮುಳ್ಳುಗಳು, ಸುವಾಸನೆ ಬೀರುವ ಹೂವುಗಳು, ಅಲ್ಲಿ ಕೂಗುವ ಕೋಗಿಲೆ ಸ್ವರ ಕಿವಿಗೆ ಇಂಪು, ಕಾಗೆ ಗೂಬೆಗಳ ಸ್ವರ ಕೇಳಲಾಗುತ್ತಿಲ್ಲ. ಪ್ರಾಣಿಗಳ ಅರಚಾಟ ಕಿರುಚಾಟಗಳಿಂದ ಕಿವಿ ಮುಚ್ಚಿಕೊಂಡು ಬೇಡ ಎಂದುಕೊಳ್ಳಲಾಗುವುದಿಲ್ಲ. ಎಲ್ಲವನ್ನ ಕೇಳಿಕೊಂಡು ಅನುಭವಿಸಿಕೊಂಡು ಸಾಗಬೇಕು. ನನ್ನ ತಲುಪಬೇಕಾದ ಜಾಗಕ್ಕೆ ಇದ್ಯಾವುದರ ಅವಶ್ಯಕತೆ ಇರಲಿಲ್ಲ .ಅಲ್ಲಿಗೆ ತಲುಪಬೇಕಾದರೆ ಇದನ್ನ ದಾಟಬೇಕು ಹಾಗಾಗಿ ಸಾಗಿದ್ದೇನೆ. ಇನ್ನೂ ದುರ್ಗಮ ಹಾದಿ ಎದುರಾಯಿತು. ಮತ್ತಷ್ಟು ಅಡ್ಡಿಗಳು ಉಂಟಾದವು ತಿರುಗಿ ಹೋಗುವ ಮನಸ್ಸಾದರೂ ಸಾಗಿಬಂದ ದಾರಿ, ಅನುಭವಿಸಿದ ಕಷ್ಟ, ಇನ್ನೊಮ್ಮೆ ನೆನೆಸಿಕೊಂಡು ಸಾಗುವ ನಿರ್ಧಾರ ಮಾಡಿದ್ದೇನೆ. ಎಲ್ಲವನ್ನು ಅನುಭವಿಸಿದ್ದರಿಂದ ಇಷ್ಟೆಲ್ಲ ಹೇಳೋದಕ್ಕೆ ಸಾಧ್ಯವಾಯಿತು. ಜಾಗ ತಲುಪಿದಾಗ ನಿಡಿದಾದ ಉಸಿರು ಬಿಟ್ಟು ತಲುಪಿದ್ದಕ್ಕೆ ಸಾರ್ಥಕ್ಯ ಸಿಗಬೇಕಾದರೆ ಇದೆಲ್ಲಾ ಅನುಭವಿಸಲೇಬೇಕು ನಾನು ಅಲ್ವಾ?
-ಧೀರಜ್ ಬೆಳ್ಳಾರೆ
ಚಿತ್ರ ಕೃಪೆ: ಇಂಟರ್ನೆಟ್ ತಾಣ