ಸ್ಟೇಟಸ್ ಕತೆಗಳು (ಭಾಗ ೨೮೧) - ಡಬ್ಬಿಯೊಳಗೆ

ಸ್ಟೇಟಸ್ ಕತೆಗಳು (ಭಾಗ ೨೮೧) - ಡಬ್ಬಿಯೊಳಗೆ

ನಾನು ಅಡುಗೆ ಮನೆಯ ಒಳಗೆ ಅನ್ನ ಬಡಿಸಿಕೊಳ್ಳೋಕೆ, ಸಾಂಬಾರ್ ಹಾಕ್ಕೊಳೋಕೆ, ತಿನ್ನೋಕೆ ಏನಾದ್ರೂ ಸಿಗುತ್ತಾ ಅಂತ ನೋಡೋಕೆ ಹೋಗುತ್ತಿದ್ದೆ. ಒಂದೆರಡು ಸಲ ಅಮ್ಮ ಬೆಂಕಿ ಸ್ವಲ್ಪ ನೋಡ್ಕೋ ಅಂದಾಗ ನಿಂತಿದ್ದೆ‌. ಆದರೆ ಇಡೀ ದಿನವೂ ಅಲ್ಲೇ ಸಮಯ ಕಳೆದಿರಲಿಲ್ಲ. ಅವತ್ತು ನೆಂಟರ ಮನೆಯಲ್ಲಿ ಏನೋ ಕಾರ್ಯಕ್ರಮ ಅಮ್ಮ ಹೋಗಲೇಬೇಕಾಗಿತ್ತು. ಅವರ ಜೊತೆಗೆ ತಂಗಿನೂ ಹೊರಟಿದ್ದಳು. ಮನೆಯಲ್ಲಿ ನಾನು ಅಪ್ಪ  ಇಬ್ಬರೇ ಆದ್ವಿ. ಹೊಟ್ಟೆಗೇನಾದರೂ ಬೇಯಿಸಿಕೊಳ್ಳಬೇಕಲ್ಲ ಅಂತ ಅಡುಗೆ ಕೋಣೆಯ ಒಳಗೆ ಹೋಗಿ ನಿಂತೆ. ಅಲ್ಲಿ ಜೀರಿಗೆ, ಕೊತ್ತಂಬರಿ, ಚಾ ಹುಡಿ, ಸಕ್ಕರೆ, ಸಾಸಿವೆ, ಉಪ್ಪು,  ಅರಶಿನ, ಮೆಣಸು ಎಲ್ಲವನ್ನು ಸಾಲಾಗಿ ಡಬ್ಬಿಯೊಳಗೆ  ಜೋಡಿಸಿಟ್ಟಿದ್ದರು. ನಾನಂದುಕೊಂಡಿದ್ದೆ ಅದರೊಳಗೆ ಅಡಿಗೆಗೆ ಬೇಕಾದ ವಸ್ತುಗಳನ್ನು ಮಾತ್ರ ಮುಚ್ಚಿಡುತ್ತಾರೆ ಅಂತ. ಆದರೆ ಬೆಂಕಿಯ ಕಾವಿನಲ್ಲಿ ನನ್ನ ಮುಖ ಬೆವರಿದ ಹಾಗೆ, ಆ ಹೊಗೆಯಲ್ಲಿ ಮೂಗು ಕಟ್ಟಿದ ಹಾಗೆ, ಅದು ಬರಿಯ ಡಬ್ಬಿಗಳು ಆಗಿರಲಿಲ್ಲ. ಅದರೊಳಗೆ ಅಮ್ಮನ ಹಲವಾರು ಕನಸುಗಳಿದ್ದವು, ಹೇಳದೇ ಉಳಿದ ಮಾತುಗಳಿದ್ದವು, ನೋವುಗಳಿದ್ದವು, ಒತ್ತಡಗಳಿದ್ದವು, ಸಿಟ್ಟು ಆಕ್ರೋಶಗಳಿದ್ದವು. ಎಲ್ಲವನ್ನು ಡಬ್ಬಿಯೊಳಗೆ ಹಾಕಿ ಮುಚ್ಚಿಟ್ಟಿದ್ದರು. ನನಗದು ಅರಿವಾದದ್ದು ಹೊರಗಿನ ಗಾವು ನನ್ನೊಳಗೆ ಸೇರಿದ ಮೇಲೆ. ಆವತ್ತಿನ ರಾತ್ರಿಯ ಊಟ ತಿನ್ನಲೇ ಬೇಕಾಗಿತ್ತು. ಯಾಕಂದ್ರೆ ನಾವೇ ಮಾಡಿದ್ದಲ್ವಾ. ಯಾವುದೂ ಸಮಪ್ರಮಾಣದಲ್ಲಿ ಇರಲಿಲ್ಲ. ಅಮ್ಮನಿಗೆ ಗೊತ್ತು ಯಾವುದನ್ನು ಯಾವ ಪ್ರಮಾಣದಲ್ಲಿ ಯಾವಾಗ ಹಾಕಬೇಕು, ಯಾವಾಗ ತೆಗೆಯಬೇಕು ಅಂತ. ಆ ಕಾರಣದಿಂದಲೇ ಇವತ್ತಿನವರೆಗೂ ಅಮ್ಮ ಮಾಡಿದ ಎಲ್ಲವನ್ನು ತಿನ್ನೋಕೆ ಆಗುತ್ತಿದೆ. ಜೊತೆಗೆ ದೊಡ್ಡ ಜಗಳವಿಲ್ಲದೆ, ದ್ವೇಷವಿಲ್ಲದೆ, ಪ್ರೀತಿಯಿಂದ ಬದುಕು ಸಾಧ್ಯ ಆಗಿದೆ. ಇದು ಅಮ್ಮನ ಹೊರತು ಬೇರೆ ಯಾರಿಂದಲು ಡಬ್ಬಿಯೊಳಗೆ ಇಟ್ಟು ಅದ್ಭುತವಾದುದನ್ನು ಬೇಯಿಸಲು ಸಾಧ್ಯವಿಲ್ಲ ಅಂತ ನನಗನಿಸಿದ್ದು ಅಮ್ಮನ ಅನುಪಸ್ಥಿತಿಯಲ್ಲಿಯೇ..

-ಧೀರಜ್ ಬೆಳ್ಳಾರೆ

ಸಾಂಕೇತಿಕ ಚಿತ್ರ ಕೃಪೆ: ಇಂಟರ್ನೆಟ್ ತಾಣ