ಸ್ಟೇಟಸ್ ಕತೆಗಳು (ಭಾಗ ೨೮೨) - ಅವನು
ಅವನು ನನಗೆ ತುಂಬಾ ಆತ್ಮೀಯ. ಶಾಲೆಯಿಂದಲೂ ಜೊತೆಗೆ ಹೆಜ್ಜೆ ಹಾಕಿದ್ದೆವು. ಗೆಳೆಯರೊಂದಿಗೆ ಯಾವುದೋ ವಿಚಾರಕ್ಕೆ ಮಾತುಕತೆ ಜೋರಾದಾಗ ನನ್ನ ಗೆಳೆಯ ತುಂಬಾ ಸುಂದರವಾಗಿ ವಾದಮಾಡಿ ಲಾಯರ್ ಆಗ್ತಾ ಇದ್ದ, ಒಂದು ಸಲ ನನ್ನ ಪೆನ್ನು ಕಳೆದುಹೋದಾಗ ಹುಡುಕಿಕೊಟ್ಟು ಪೊಲೀಸ್ ಆಗಿದ್ದ, ನಾನು ಕೆಲವು ತಪ್ಪು ಮಾಡಿದಾಗ ಅದನ್ನು ತಿದ್ದಿ ಹೇಳಿ ನನಗೆ ಗುರುವಾಗಿದ್ದ, ಅವರ ಮನೆಯ ಬಿದ್ದು ಹೋದ ಕೊಟ್ಟಿಗೆಯ ಗೋಡೆ ಕಟ್ಟಿ ಮೇಸ್ತ್ರಿ ಆಗಿದ್ದ, ಪಕ್ಕದ ಮನೆಯ ಬಲ್ಬ್ ರಿಪೇರಿ ಮಾಡಿ ಎಲೆಕ್ಟ್ರಿಷಿಯನ್ ಆಗಿದ್ದ, ಕೆಲವು ಗೆಳೆಯರಿಗೆ ಪ್ರೇಮ ಪತ್ರ ಬರೆದುಕೊಟ್ಟು ಬರಹಗಾರನಾಗಿದ್ದ, ಆಟವಾಡಿ ಬಿದ್ದು ಗಾಯ ಮಾಡಿಕೊಂಡಾಗ ಮದ್ದು ಹಚ್ಚಿ ವೈದ್ಯನಾಗಿದ್ದ, ಎಲ್ಲವನ್ನು ಕಳೆದುಕೊಂಡಿದ್ದೇನೆ ಇನ್ನೇನು ಇಲ್ಲ ಅಂತ ಆಳುತ್ತಿದ್ದಾಗ ಧೈರ್ಯ ತುಂಬಿ ಸ್ಪೂರ್ತಿನೀಡುವ ಮನಶಾಸ್ತ್ರಜ್ಞನಾಗಿದ್ದ, ನಮ್ಮ ಚಂದದ ಫೋಟೋಗಳನ್ನು ನಮ್ಮದೇ ಮೊಬೈಲಲ್ಲಿ ಅವನು ತುಂಬಾ ಸುಂದರವಾಗಿ ಕ್ಲಿಕ್ಕಿಸಿ ಫೋಟೋಗ್ರಾಫರ್ ಆಗಿದ್ದ, ಭಜನೆಗಳನ್ನು ಹಾಡಿ ಹಾಡುಗಾರನಾಗಿದ್ದ, ವಾದ್ಯಗಾರನೂ ಕೂಡ, ಹೀಗೆ ಅವನು ಆಗಿರುವ ಪಟ್ಟಿಗಳೆಲ್ಲಾ ತುಂಬಾ ದೊಡ್ಡದಿದೆ. ಆದರೆ ಸದ್ಯಕ್ಕೆ ನಾನೊಂದು ಕೆಲಸ ಪಡೆದು ತಿಂಗಳಿಗೆ ಇಂತಿಷ್ಟು ಸಂಪಾದಿಸಿ ಬದುಕು ನಡೆಸುತ್ತಿದ್ದೇನೆ . ಅವನು ಎಲ್ಲಿನ ಕೈತಪ್ಪಿ ಹೋದನೋ ಗೊತ್ತಾಗ್ತಾ ಇಲ್ಲ. ಮೇಲೆ ಹೇಳಿದ ಎಲ್ಲಾ ಕೆಲಸವು ಅವನಿಂದ ತುಂಬಾ ಸುಲಭವಾಗಿ ಸಾಧ್ಯವಾಗ್ತಾ ಇತ್ತು. ಆದರೆ ಒಂದು ಕ್ಷಣ ಅವನ ಮನೆಯವರ ಪರಿಸ್ಥಿತಿಗೆ ಮರುಗಿ ಜವಾಬ್ದಾರಿ ಅನ್ನೋದಕ್ಕೆ ಹೆಗಲು ಕೊಟ್ಟು ಇದೀಗ ಕೂಲಿ ಕೆಲಸ ಮಾಡ್ತಾ ಇದ್ದಾನೆ. ಶಿಕ್ಷಣ ಪೂರ್ತಿಯಾಗಲಿಲ್ಲ ಅದಕ್ಕೆ ದೊಡ್ಡ ಕೆಲಸ ಸಿಗಲಿಲ್ಲ. ಪ್ರತಿಭೆಯನ್ನು ಸಾಣೆ ಹಚ್ಚೋಣವೆಂದರೆ ಸದ್ಯದ ಪರಿಸ್ಥಿತಿ ಮನೆಯಿಂದ ದೂರ ಹೋಗೋಕೆ ಬಿಡ್ತಾ ಇಲ್ಲ. ಇದು ಇವನೊಬ್ಬನೇ ಕಥೆಯಲ್ಲ ಹಲವಾರು ಜನ ಇಂಥವರೇ ಬೇರೆ ಬೇರೆ ಕಡೆ ಓಡಾಡುತ್ತಿದ್ದಾರೆ. ನಮಗೆ ಒಂದು ಕೆಲಸದವರಾಗಿ ಮಾತ್ರ ಕಾಣುತ್ತಾರೆ. ಆ ಕೆಲಸಕ್ಕಿಂತ ಮೊದಲು ಅವರು ಮೇಲೆ ಹೇಳಿರುವ ತುಂಬ ಕೆಲಸಗಳನ್ನು ಮಾಡಿದವರು ಮಾಡುವವರು ಕೂಡ ಆಗಿರುತ್ತಾರೆ. ಪರಿಸ್ಥಿತಿ ಮತ್ತು ಜವಾಬ್ದಾರಿ ಇದು ಎಲ್ಲವನ್ನೂ ಎಲ್ಲರನ್ನು ಬದಲಾಯಿಸುತ್ತದೆ.
-ಧೀರಜ್ ಬೆಳ್ಳಾರೆ
-ಚಿತ್ರ ಕೃಪೆ: ಇಂಟರ್ನೆಟ್ ತಾಣ