ಸ್ಟೇಟಸ್ ಕತೆಗಳು (ಭಾಗ ೨೮೩) - ನೆಲ

ಸ್ಟೇಟಸ್ ಕತೆಗಳು (ಭಾಗ ೨೮೩) - ನೆಲ

ಅಲ್ಲ ನಾನು ಅನ್ಕೊತೇನೆ, ನಮಗೆ ಬಿಸಿಯಾಗಿ ಕುದಿಯುತ್ತಿರುವ ನೀರಿನ ಒಂದು ಹನಿ ಕೈಯ ಮೇಲೆ ಬಿದ್ದಾಗ ಆ ಬಿಸಿಯನ್ನು ತಡೆದುಕೊಳ್ಳಲಾಗುವುದಿಲ್ಲ. ಒಂದು ಸಲ ಇಡೀ ದೇಹವೇ ನಡುಗಿಬಿಡುತ್ತದೆ. ಹಾಗಿರುವಾಗ ಭೂಮಿಗೆ ಏನಾಗಿರಬಹುದು ಅಂತ. ನಮ್ಮೂರಲ್ಲಿ ಊರನ್ನು ಊರನ್ನು ಸೇರಿಸೋಕೆ, ಜನ ಸಾಗ ಬೇಕು ಅಂತ ರಸ್ತೆಯನ್ನು ನಿರ್ಮಿಸುತ್ತಾರೆ. ರಸ್ತೆ ನಿರ್ಮಾಣ ಕೆಲಸವನ್ನು ಗಮನಿಸಿದರೆ ಡಾಂಬಾರನ್ನು ಕುದಿಸ್ತಾ ಇದ್ರು. ಬೆಂಕಿಯ ಶಾಖಕ್ಕೆ ಕಪ್ಪು ಮೇಣ ಕೊತಕೊತನೆ ಕುದಿಯುತ್ತಿದೆ. ಅದರ ಬಿಸಿಗೆ ಹತ್ತಿರ ಚಲಿಸುವುದು ಸಾಧ್ಯವಾಗುತ್ತಿರಲಿಲ್ಲ. ಆ ಬಿಸಿ ದ್ರವವನ್ನ ನೆಲಕ್ಕೆ ಸುರಿದು ಕಪ್ಪಗಿನ ಟಾರು ರಸ್ತೆಯನ್ನು ನಿರ್ಮಾಣ ಮಾಡುತ್ತಿದ್ದರು. ಆಗ ನೆಲಕ್ಕೆ ಅದೆಷ್ಟು ನೋವಾಗಿರಬಹುದು. ಇಡೀ ದೇಹವು ಸುಟ್ಟು ಹೋದಂತ ಅನುಭವವಾದರೂ ಈ ಭೂಮಿ ಅದನ್ನ ತಡೆದುಕೊಂಡಿತ್ತು. ನಮ್ಮ ಗಾಡಿಗಳು ಸಾಗೋಕೆ ಸಹಾಯ ಮಾಡಿತ್ತು. ನೋವನ್ನ ಅನುಭವಿಸಿಯೂ ಒಳಿತನ್ನು ಬಯಸುವ ನೆಲದ ತಾಳ್ಮೆ ತುಂಬಾ ದೊಡ್ಡದು ಅನಿಸುತ್ತದೆ. ಅದಕ್ಕೆ ದೊಡ್ಡವರ ಹೇಳಿದ್ದು ಒಂದು ಸಲ ನೆಲದ ದೇವರಲ್ಲಿ ಬೇಡಿ ಕಾಲಿಡಲು. ನೆಲ ನಮ್ಮನ್ನ ಸಹಿಸಿಕೊಂಡಷ್ಟು ದಿನ ನಾವು ಬಾಳುತ್ತೇವೆ ಅದು ಕೊನೆಯಾದರೆ ನಾವು ನೆಲಸಮವಾಗುತ್ತೇವೆ.

-ಧೀರಜ್ ಬೆಳ್ಳಾರೆ

ಚಿತ್ರ ಕೃಪೆ: ಇಂಟರ್ನೆಟ್ ತಾಣ