ಸ್ಟೇಟಸ್ ಕತೆಗಳು (ಭಾಗ ೨೮೫) - ಚೌಕಟ್ಟು

ಸ್ಟೇಟಸ್ ಕತೆಗಳು (ಭಾಗ ೨೮೫) - ಚೌಕಟ್ಟು

"ಆ ಗೋಡೆಗೆ ಬಡಿದ ಮೊಳೆಗೆ ನೇತು ಹಾಕಿದ ಫೋಟೋದ ಒಳಗಿನ ಚೌಕಟ್ಟಿನೊಳಗೆ ಬಂದಿಯಾದ ವ್ಯಕ್ತಿಗಳ ಕತೆ ನಿಮಗೆ ಗೊತ್ತಿಲ್ಲ" ಅಂತ ಅವನು ಗೋಡೆಗೆ ನೇತು ಹಾಕಿರುವ ನಾಲ್ಕು ಚಿತ್ರಗಳನ್ನು ತೋರಿಸುತ್ತಾ ಸಿಕ್ಕಿದವರ ಬಳಿಯೆಲ್ಲಾ ಹೇಳುತ್ತಲೇ ತಿರುಗಾಡುತ್ತಿದ್ದ. ಅಲ್ಲಿ ನಿಲ್ಲಿಸಿರುವ ಗೋಡೆಗೆ ಯಾವುದೇ ರೀತಿಯಲ್ಲೂ ಕೂಡ ಉಳಿದ ಗೋಡೆಗಳು ಸಂದಿಸಿಲ್ಲ. ಮೇಲೊಂದು ಹೊದಿಕೆ ಇಲ್ಲ. ಏಕಾಂಗಿಯಾಗಿ ನಿಂತಿರುವ ಗೋಡೆಯಲ್ಲಿ ತೂಗು ಹಾಕಲಾಗಿದೆ ಚಿತ್ರಗಳನ್ನು. ಅದರೊಳಗೆ ಒಂದಷ್ಟು ಮುಖಗಳು ತುರುಕಿ ಕೊಂಡಿದ್ದಾವೆ. ಅಲ್ಲಿ ಇಟ್ಟಿರುವ ಚೌಕಟ್ಟಿನೊಳಗಿನಿಂದ ಹೊರಬರಲಾಗದೆ ಚಡಪಡಿಸುತ್ತಿದ್ದಾವೆ. ಅವನಿಗೂ ಗೊತ್ತಿಲ್ಲ ಫೋಟೋ ಚೌಕಟ್ಟಿನೊಳಗೆ ಸಿಗದೇ ಇರುವ ಹಲವಾರು ಚಿತ್ರಗಳು ಕೂಡ ತಮ್ಮ ಕಥೆಗಳನ್ನು ಹೊತ್ತು ತಿರುಗುತ್ತಿವೆ.

ಸಿಕ್ಕಿರುವ ಕೆಲವು ಚಿತ್ರಗಳು ಮಾತ್ರ ಚೌಕಟ್ಟಿನೊಳಗೆ ಮುಖವನ್ನು ತುರುಕಿಸಿ ತಮ್ಮ ಕಥೆಯನ್ನು  ಹೇಳಲು ಪ್ರಯತ್ನಿಸುತ್ತಿವೆ ಅಂತ .ಚಿತ್ರಗಳು ಸಂಭ್ರಮವನ್ನು ಬಿಂಬಿಸುತ್ತಿವೆ. ಮುಖದಲ್ಲಿ ನಗು, ಖುಷಿಯ ಓಕುಳಿ, ಉಲ್ಲಾಸದ ನಗು ಚಿಮ್ಮುತ್ತಿದೆ. ಆದರೆ ಆ ಭಾವಚಿತ್ರ ಚೌಕಟ್ಟಿನೊಳಗೆ ಬಂದ ನಂತರ ನಡೆದ ಅವಗಡಗಳು ಅರಿವು ನೋಡುವ ನಮಗಿಲ್ಲ. ಅಲ್ಲಿ ಚಿತ್ರದೊಳಗೆ ನಿಂತಿರುವ ವ್ಯಕ್ತಿಗಳಿಗೂ ಇಲ್ಲ. ಹೊಡೆದ ಗುಂಡುಗಳು, ಬಾಂಬುಗಳ ನೋವಿನ ಭೀಕರತೆಯ ಅರಿವು ಅವರಿಗಿದ್ದರೂ ಅವರು ನಗುತ್ತಿರಲಿಲ್ಲ ಅಥವಾ ಅಲ್ಲಿಯೇ ಇರುತ್ತಿರಲಿಲ್ಲ. ಅನಿಶ್ಚಿತತೆಯ ಬದುಕು ನಮ್ಮದು, ವರ್ತಮಾನವೊಂದೇ ಸತ್ಯ. ಈ ಕ್ಷಣ ಜೀವಿಡುವುದಷ್ಟೇ ಬದುಕು. ಇಂದಿಗೂ ಅವನು ಅದನ್ನೇ ಹೇಳುತ್ತಿದ್ದಾನೆ "ಈ ಚೌಕಟ್ಟಿನೊಳಗೆ ತುರುಕಿಸಿದ ಮುಖಗಳ ಕಥೆ ನಿಮಗೆ ಗೊತ್ತಿಲ್ಲ ಅಂತ ".

-ಧೀರಜ್ ಬೆಳ್ಳಾರೆ

ಚಿತ್ರ ಕೃಪೆ: ಇಂಟರ್ನೆಟ್ ತಾಣ