ಸ್ಟೇಟಸ್ ಕತೆಗಳು (ಭಾಗ ೨೯೦) - ಸಲಹೆ

ಓದಿನಿಂದಲೇ ಪರಿಶ್ರಮಿ ಅವಳು. ಕೆಲಸಕ್ಕೆ ಸೇರ್ಕೊಬೇಕು, ಸಂಪಾದಿಸಬೇಕು, ಮನೆಯವರನ್ನ ಚೆನ್ನಾಗಿ ನೋಡ್ಕೋಬೇಕು ಇದಿಷ್ಟೇ ಅವಳ ದೊಡ್ಡ ಕನಸು. ಕೆಲಸದ ಹುಡುಕಾಟ ಆರಂಭವಾಯಿತು ಅಷ್ಟು ಸುಲಭಕ್ಕೆ ಬಯಸಿದ ಕೆಲಸಗಳು ಸಿಗಲಿಲ್ಲ. ಪಟ್ಟ ಪರಿಶ್ರಮಕ್ಕೆ ಅಂತೂ ಸಂಸ್ಥೆಯೊಂದರಲ್ಲಿ ಕೆಲಸ ಸಂಪಾದಿಸಿದಳು. ಬದುಕಿಗೆ ಬೇಕಾದ ಸಂಬಳ ದೊರೆಯಿತು. ಮನೆಗೊಂದು ಆಧಾರವಾಗಬೇಕು ಅನ್ನೋದಷ್ಟೇ ಅವಳ ಜೀವನವಾಯಿತು. ದಿನಕಳೆದಂತೆ ಸಂಸ್ಥೆಯಲ್ಲಿ ಕೆಲಸದ ಒತ್ತಡಗಳು ಹೆಚ್ಚಾದವು, ಎಲ್ಲ ಕೆಲಸಗಳು ಅವಳನ್ನೇ ಹುಡುಕಿಕೊಂಡು ಬಂದವು. ಅವಳಿಗೆ ಕೆಲಸ ಮಾಡುವುದೆಂದರೆ ಇಷ್ಟ ಮತ್ತಷ್ಟು ಉತ್ಸಾಹದಿಂದ ಕೆಲಸ ಮಾಡುತಿದ್ದಳು. ಒಂದು ದಿನ ಸಂಸ್ಥೆಯ ಕೆಲಸದ ವಿವರದ ವರದಿಯನ್ನ ಕಛೇರಿಯಲ್ಲಿ ತೆರೆದಾಗ ಇಂದಿನವರೆಗೆ ಅವಳು ಮಾಡಿದ ಹೆಚ್ಚಿನ ಎಲ್ಲ ಕೆಲಸಗಳಲ್ಲಿ ಇನ್ಯಾರೋ ಹೆಸರು ಕಾಣುತ್ತಿತ್ತು. ಅವಳಿಗೆ ಅಂದಿನಿಂದ ಕಾಡುವಿಕೆ ಹೆಚ್ಚಾಯ್ತು. ದುಡಿಮೆ ನನ್ನದು ಹೆಸರು ಇನ್ಯಾರಿಗೋ ಸೇರುತ್ತಿದೆ. ಯೋಚನೆಯಿಂದ ದೇಹದ ಆರೋಗ್ಯ ಕುಸಿಯಿತು. ಇದನ್ನು ಪ್ರಶ್ನೆ ಮಾಡಿದರೆ ಕೆಲಸ ಕಳೆದುಕೊಳ್ಳಬೇಕು ಮತ್ತೆ ಮನೆಕಡೆಗೆ ನಡೆಯಬೇಕು. ಸದ್ಯಕ್ಕೆ ಅವಳ ಮನಸ್ಸಲ್ಲಿ ಓಡುತ್ತಿರುವುದು ಎರಡೇ ಆಲೋಚನೆಗಳು, ಒಂದು ತನಗಾಗುತ್ತಿರುವ ಅನ್ಯಾಯವನ್ನು ಎದುರಿಸಿ ಇಲ್ಲಿಂದ ಹೊರ ನಡೆಯಬೇಕು, ಅಥವಾ ನನ್ನ ದುಡಿಮೆ ನನ್ನ ಆತ್ಮತೃಪ್ತಿಗೆ, ತಪ್ಪಿಗೆ ಒಂದಲ್ಲ ಒಂದು ದಿನ ಶಿಕ್ಷೆಯಿದೆ. ನಾನು ಕೊಟ್ಟ ಕೆಲಸವನ್ನು ಚಾಚೂತಪ್ಪದೆ ಪಾಲಿಸುತ್ತೇನೆ.
ಎರಡು ಆಯ್ಕೆಗಳಲ್ಲಿ ಯಾವುದನ್ನು ಆರಿಸಿಕೊಳ್ಳಬೇಕು ಅನ್ನುವ ಯೋಚನೆಯಲ್ಲಿ ಮತ್ತೆ ಕುಗ್ಗಿದ್ದಾಳೆ ದಿನವೂ ನೋವು ನುಂಗುತ್ತಾ... ನಿಮ್ಮದೇನಾದರೂ ಸಲಹೆ ಇದೆಯಾ?
-ಧೀರಜ್ ಬೆಳ್ಳಾರೆ
ಚಿತ್ರ ಕೃಪೆ: ಇಂಟರ್ನೆಟ್ ತಾಣ