ಸ್ಟೇಟಸ್ ಕತೆಗಳು (ಭಾಗ ೨೯೪) - ಅಮ್ಮನ ಮಾತು

ನನಗೆ ಇತ್ತೀಚಿಗೆ ಕೆಲಸ ಮಾಡೋದಕ್ಕೆ ಒಂದಷ್ಟು ಆಲೋಚನೆಗಳು ಇದ್ದರೂ, ಅದು ಆಚರಣೆಗೆ ಇಳಿತಾ ಇಲ್ಲ. ಕೆಲವೊಮ್ಮೆ ಮಾಡಿದ್ದು ಸರಿ ಆಗ್ತಾ ಇಲ್ಲ. ಹಲವು ಜನರ ಹತ್ರ ಮಾತಾಡಿದ್ರು ಹಲವು ಕಾರಣಗಳು ಸಿಕ್ತಾ ಇತ್ತು. ಯಾವ ಕಾರಣವೂ ನನ್ನದು ಅಂತ ಅನಿಸಲಿಲ್ಲ. ನನಗೊಂದು ಅಭ್ಯಾಸ ನನಗೇನೇ ಅನಿಸಿದರೂ ಅಮ್ಮನ ಬಳಿ ಹೇಳಿಕೊಳ್ತೇನೆ. ಎಲ್ಲ ಸಮಸ್ಯೆಗೂ ಪರಿಹಾರ ಅವರ ಬಾಯಿಂದ ಬರುತ್ತಿರಲಿಲ್ಲ. ಅವರ ದಿನಬಳಕೆ ಯಾವುದೋ ವಿಚಾರವನ್ನ ನನ್ನ ಜೊತೆಗೆ ಹಂಚಿಕೊಂಡು ಅದರಲ್ಲಿ ನಾನು ಕಂಡು ಕೊಳ್ಳಬೇಕಿತ್ತು ನನ್ನ ಸಮಸ್ಯೆಗೆ ಪರಿಹಾರವನ್ನು . "ಅಮ್ಮಾ ಯಾವುದು ಸರಿಯಾಗಿಲ್ಲ ಅಂತ ಅನಿಸ್ತಾ ಇದೆ. ಅದಕ್ಕೆ ಏನು ಮಾಡಬೇಕು ಅಂತ ಗೊತ್ತಾಗ್ತಾ ಇಲ್ಲ. ಅಮ್ಮಾ ಏನು ವಿಚಾರಿಸಲಿಲ್ಲ. "ನೋಡು ಕೆಲವು ಬಟ್ಟೆಗಳು ಬಣ್ಣ ಬಿಡುತ್ತವೆ. ಅದನ್ನ ನೀರಲ್ಲಿ ನೆನೆ ಹಾಕುವಾಗ ಉಳಿದ ಬಟ್ಟೆಗಳ ಜೊತೆ ಸೇರಿಸಿದರೆ ಚೆನ್ನಾಗಿರೋ ಬಟ್ಟೆಯೂ ಹಾಳಾಗುತ್ತೆ ನೋಡಿಕೊಂಡು ಯಾವುದನ್ನು ಹೇಗೆ ನೆನೆಹಾಕಬೇಕು ಅನ್ನೋದು ನಿನ್ನ ಜವಾಬ್ದಾರಿ. ಈ ಅಡಿಗೆ ಮಾಡುವಾಗ ಎಲ್ಲವನ್ನೂ ಎಲ್ಲದರ ಜೊತೆ ಹೇಗೆ ಬೇಕೋ ಹಾಗೆ ಸೇರಿಸುವುದಿಲ್ಲ. ಅದಕ್ಕೊಂದಿಷ್ಟು ಅಳತೆಗಳು ಇರುತ್ತವೆ. ಯಾವುದನ್ನು ಎಷ್ಟು ಪ್ರಮಾಣದಲ್ಲಿ ಹಾಕಬೇಕು ಯಾವುದು ಜೊತೆಯಾಗುತ್ತದೆ ಅನ್ನೋದನ್ನ ತಿಳುಕೊಂಡಾಗ ಮಾತ್ರ ನೀನು ಚೆನ್ನಾಗಿರುವ ಊಟವನ್ನ ಮಾಡಬಹುದು ಇಷ್ಟೇ ಬದುಕು". "ನಿನ್ನ ಸಂಬಂಧವನ್ನು ಹೇಗೆ ಬೆಳೆಸಬೇಕು ಬಳಸಿಕೋ ಬೇಕು ಅನ್ನೋದು ಗೊತ್ತಿರಬೇಕು. ಬಣ್ಣ ಬಿಡುವುದನ್ನು ಆದಷ್ಟು ದೂರ ಇಟ್ಟರೆ ನಿನ್ನ ಬದುಕಿನ ಬಣ್ಣ ಕೇಳುವುದಿಲ್ಲ". ಇದನ್ನು ನಾನಿನ್ನು ನನ್ನ ಜೀವನಕ್ಕೆ ಹೊಂದಿಸಿಕೊಳ್ಳಬೇಕಷ್ಟೆ.
-ಧೀರಜ್ ಬೆಳ್ಳಾರೆ
ಚಿತ್ರ ಕೃಪೆ: ಇಂಟರ್ನೆಟ್ ತಾಣ