ಸ್ಟೇಟಸ್ ಕತೆಗಳು (ಭಾಗ ೨೯೫) - ವಸ್ತುಗಳು
ನಾನು ಬಡವನ ಮನೆ ಅಲಂಕರಿಸುವುದು ಇಲ್ಲ, ಆದರೆ ಬಡವನ ಹೊಟ್ಟೆ ತುಂಬಿಸುತ್ತೇನೆ. ಹೀಗಂತ ಅವನಂದಾಗ ನನಗೆ ಅರ್ಥನೇ ಆಗ್ಲಿಲ್ಲ. ಇದು ಹೇಗೆ ಸಾಧ್ಯ .ಅದಕ್ಕೆ ಅವನು ನನ್ನ ಒಂದು ಸ್ಥಳಕ್ಕೆ ಕರೆದುಕೊಂಡು ಹೊರಟ. ಅಗಲವಾದ ಎರಡು ರಸ್ತೆಗಳ ಬದಿಯಲ್ಲಿ ಒಂದಷ್ಟು ವಿಶಾಲವಾದ ಜಾಗ ಅಲ್ಲೊಂದು ಸಣ್ಣ ಬಿಡಾರ ಎದ್ದುನಿಂತಿದೆ. ಅದು ನೆಲದ ಮೇಲೆ ನಿಲ್ಲೋಕೆ ಆರಂಭವಾಗಿ ಹತ್ತರಿಂದ ಹದಿನೈದು ದಿನಗಳು ಆಗಿರಬಹುದು ಅಷ್ಟೇ. ಅಲ್ಲಿ ಬದಿಯಲ್ಲಿ ಸಿಕ್ಕಿದ ಹುಡಿ ಕಟ್ಟಿಗೆಯಲ್ಲಿ ಅನ್ನ ಬೇಯುತ್ತಿದೆ. ಬಟ್ಟೆ ಒಗಿಯೋಕೆ 2 ಬಕೆಟ್ ಅಲ್ಲಿದೆ. ಇದು ಬಿಟ್ಟು ಅಲ್ಲೇನು ಕಾಣಿಸ್ತಾ ಇಲ್ಲ. ಆಗಿನ್ನೂ ಸರಿಯಾಗಿ ಬೆಳಕು ಮೂಡಿರಲಿಲ್ಲ. ಬೆಳಕು ಮೂಡಿದ ಹಾಗೆ ಮುಚ್ಚಿಟ್ಟಿದ್ದ ಟರ್ಪಾಲುಗಳನ್ನು ತೆಗೆದಾಗ ಕಂಡದ್ದೇ, ದೊಡ್ಡ ಮನೆಗಳಲ್ಲಿ ಸಾವಕಾಶವಾಗಿ, ವಿಶೇಷವಾಗಿ ಕುಳಿತುಕೊಳ್ಳಲು ಬಳಸುವ ಆಸನಗಳು. ಮರದ ದೊಡ್ಡ ಕುರ್ಚಿ, ಸೋಫಾ ಸೆಟ್, ಉಯ್ಯಾಲೆಗಳು. ಎಲ್ಲವನ್ನೂ ಸಾಲಾಗಿ ಜೋಡಿಸಲಾಗಿದೆ. ದಾರಿಯಲ್ಲಿ ಹೋಗೋ ದೊಡ್ಡ ಮನೆಯವರು ದೊಡ್ಡ ಮನಸ್ಸು ಮಾಡಿ ಖರೀದಿಸಿದರೆ, ಸಣ್ಣ ಮನೆಯ ದೊಡ್ಡ ಮನಸ್ಸಿನವರ ಹೊಟ್ಟೆ ತುಂಬುತ್ತದೆ. ಈ ಸಣ್ಣ ಮನೆಯ ಮಕ್ಕಳು ಆಸನದ ಮೇಲೆ ಆಟವಾಡುತ್ತಾರೆ, ಉಯ್ಯಾಲೆಯಾಡುತ್ತಾರೆ. ಅವರಿಗೆ ಅದರ ಬೆಲೆ ಗೊತ್ತಿಲ್ಲ. ಅಪ್ಪನ ಪರಿಶ್ರಮದ ಅರಿವಿದೆ .ಮುಂದೊಂದು ದಿನ ತಾವು ಇದನ್ನೇ ಅನುಸರಿಸಬೇಕು ಎನ್ನುವ ಪುಟ್ಟ ಕನಸಿದೆ. ದೊಡ್ಡ ಮನೆಯಲ್ಲಿ ಖರೀದಿಸಿದ ಈ ವಸ್ತುಗಳಿಗೆ ಬಂದವರು ಬೆಲೆ ಕಟ್ಟುತ್ತಾರೆ ಹೊರತು ತಯಾರಿಸಿದವನಿಗಲ್ಲ. ಬೀದಿ ಮನೆಯವನು ದಿನವೂ ದೇವರಲ್ಲಿ ಪ್ರಾರ್ಥಿಸುವುದು ಏನೆಂದರೆ ದೇವರೇ ಎಲ್ಲರೂ ಶ್ರೀಮಂತರಾಗಲಿ, ಲಕ್ಷಾಂತರ ದುಡ್ಡು ಅವರಲ್ಲಿ ಸಂಗ್ರಹವಾಗಲಿ ಅನ್ನೋದಷ್ಟೇ. ಆಗ ನನಗೆ ಅರ್ಥವಾಯಿತು, ಈ ಸಾಲಾಗಿ ಜೋಡಿಸಿಟ್ಟ ವಸ್ತುಗಳೇ ಬಡವರ ಮನೆಯನ್ನ ಅಲಂಕರಿಸಿದ್ದರೂ ಅವರ ಹೊಟ್ಟೆಯನ್ನು ತುಂಬಿಸುತ್ತವೆ ಅಂತ..
-ಧೀರಜ್ ಬೆಳ್ಳಾರೆ
ಚಿತ್ರ ಕೃಪೆ: ಇಂಟರ್ನೆಟ್ ತಾಣ