ಸ್ಟೇಟಸ್ ಕತೆಗಳು (ಭಾಗ ೨೯೬) - ಹಸಿವು ಮಾತಾಡಿದೆ

ಸ್ಟೇಟಸ್ ಕತೆಗಳು (ಭಾಗ ೨೯೬) - ಹಸಿವು ಮಾತಾಡಿದೆ

ಈ ಹಸಿವು ಎಲ್ಲರ ಜೊತೆ ಮಾತನಾಡುವುದಿಲ್ಲ. ಅದನ್ನ ಅಷ್ಟು ಸುಲಭಕ್ಕೆ ಭೇಟಿಯಾಗಿ ಅದರ ಜೊತೆ ಕುಳಿತು ಮಾತನಾಡುವ ಅವಕಾಶ ಎಲ್ಲರಿಗೂ ಸುಲಭಕ್ಕೆ ಸಿಗುವುದಿಲ್ಲ. ನಾನಂದುಕೊಂಡಿದ್ದೆ. ಅವತ್ತು ಊರ ಜಾತ್ರೆ. ಹಾಗಾಗಿ ದೇವಸ್ಥಾನದಲ್ಲಿ ಅನ್ನಸಂತರ್ಪಣೆ ಏರ್ಪಡಿಸಿದ್ದರು. ಮಳೆಯು ತನ್ನೆಲ್ಲಾ ಪೌರುಷವನ್ನ, ಸಿಟ್ಟನ್ನ ಭೂಮಿ ಮೇಲೆ ತೋರಿಸುತ್ತಿದೆಯೋ ಅನ್ನೋ ರೀತಿಯಲ್ಲಿ ಆಕಾಶದಿಂದ ರಪರಪನೆ ಸುರಿಯಲಾರಂಭಿಸಿತು. ಅದರ ಹೊಡೆತಕ್ಕೆ 

ಹಾಕಿದ್ದ ಶಾಮಿಯಾನ ಭಾರದಿಂದ ನೀರನ್ನು ಹೊತ್ತು ಸುರಿಸಲಾರಂಭಿಸಿತು. ಕೆಲವು ಕಂಬಗಳು ಭಾರ ತಾಳಲಾರದೆ ಅಡ್ಡ ಮಲಗಿತ್ತು. ಅನ್ನವನ್ನ ಸಂತರ್ಪಣೆ ಮಾಡಲೇಬೇಕು ಹಾಗಾಗಿ ಬಡಿಸುವವರು ದೇವಸ್ಥಾನದ ಜಗಲಿಯಲ್ಲಿ ನಿಂತಿದ್ದರು. ತುಂಬಾ ಜನ ಮಳೆ ನಿಲ್ಲೋವರೆಗೆ ಕಾಯ್ತಾ ಇದ್ದರು. ಆದರೆ ಅದೊಂದು ಕುಟುಂಬ ಮಳೆಯಲ್ಲಿ ನೆನೆದುಕೊಂಡೇ ಹೋಗಿ ತಟ್ಟೆ ಹಿಡಿದು ಅನ್ನವನ್ನ ತೆಗೆದುಕೊಂಡು ಬಂದು ಮತ್ತೆ ಆ ಮಳೆಯಲ್ಲೇ ಒಂದು ಮೂಲೆಯಲ್ಲಿ ನಿಂತು ಅನ್ನವನ್ನು ಉಂಡರು. ಮತ್ತೊಂದೆರಡು ಸಲ ಹಾಕಿಕೊಂಡು ಬಂದರು. ಇನ್ನೊಂದೆರಡು ಸಲ ಹಾಕಿಕೊಂಡು ತಂದಿದ್ದ ಸಣ್ಣ ಲಕೋಟೆಗೆ ತುಂಬಿಸಿಕೊಂಡು, ಮಳೆ ನೀರಿನಲ್ಲಿ ಕೈ ಜೊತೆಗೆ ತಟ್ಟೆಯನ್ನು ತೊಳೆದು ಅದೇ ಮಳೆಯಲ್ಲಿ ನಡೆಯುತ್ತಾ ಹೊರಟರು. ಹಸಿವು ಅವರೊಂದಿಗೆ ಮಾತನಾಡಿದ್ದ ಕಾರಣ ಈ ಮಳೆ ತೀವ್ರತೆ ಹಸಿವಿನ ಮುಂದೆ ದೊಡ್ಡದು ಅನಿಸಲೇ ಇಲ್ಲ. ಹಸಿವು ಎಲ್ಲರ ಜೊತೆ ಮಾತನಾಡುವುದಿಲ್ಲ. ಹಸಿವು ಮಾತನಾಡಿಸಿದಾಗ ಹೊಸ ಸಾಧ್ಯತೆಗಳು, ಹೊಸ ಕೆಲಸಗಳು ನಮ್ಮಿಂದ ಸಾಧ್ಯವಾಗುತ್ತವೆ. ಹಸಿವಿಲ್ಲದಿದ್ದರೆ ಬದುಕಬೇಕು ಅನ್ಸೋದಿಲ್ಲ ಅಂತೆ. ನಿಜಾನಾ ? ನೀವೇನಂತೀರಿ?

-ಧೀರಜ್ ಬೆಳ್ಳಾರೆ

ಚಿತ್ರ ಕೃಪೆ: ಇಂಟರ್ನೆಟ್ ತಾಣ