ಸ್ಟೇಟಸ್ ಕತೆಗಳು (ಭಾಗ ೨೯೭) - ಸುಕ್ಕು
ಮನೆಯಲ್ಲಿ ಕುಳಿತು ಟಿವಿ ನೋಡ್ತಾ ಇದ್ದೆ. ತುಂಬಾ ಆಸಕ್ತಿದಾಯಕ ಸನ್ನಿವೇಶ ಆಗ್ತಾ ಇರುವಾಗ ಕರೆಂಟು ಹೋಗಿ ಬಿಡ್ತು. ಕರೆಂಟಿನವನಿಗೆ ಬಯ್ಯುತ್ತಾ ಮೌನವಾದಾಗ ಪಕ್ಕದ ಮನೆಯಲ್ಲಿ ಸಣ್ಣ ಬೊಬ್ಬೆ ಕೇಳಿಸ್ತಾ ಇತ್ತು. ಹೋಗಿ ನೋಡೋದ್ಯಾಕೆ ಇಲ್ಲೇ ಕೇಳೋಣ ಅಂತ ಆ ಕಡೆಗೆ ಕಿವಿಯನ್ನು ಚಾಚಿದೆ.
"ಅಮ್ಮಾ, ನೀನು ಸದಾ ಮನೆಲೇ ಇರ್ತಿಯ, ನಾನು ಮಾಡುವ ಕೆಲಸಗಳಿಗೆಲ್ಲ ಇದು ಸರಿ ಇದು ತಪ್ಪು ಅಂತ ನೀನು ಹೇಳ್ತಾ ಇರಬೇಕು. ನೀನು ಹೇಳದೇ ಇದ್ರೆ ನನಗೆ ಹೇಗೆ ಅರ್ಥ ಆಗೋದು. ಅದಲ್ದೆ ನಿನಗೆ ಒಂದಷ್ಟು ಕರ್ತವ್ಯಗಳು ಇರುತ್ತಲ್ವಾ, ಮಕ್ಕಳನ್ನು ಸರಿದಾರಿಯಲ್ಲಿ ಕರೆದುಕೊಂಡು ಹೋಗುವುದು" "ಹೌದಪ್ಪ ನೀನು ಹೇಳೋದೆಲ್ಲ ಸರಿ ಆದರೆ ನೀನಿನ್ನು ಸಣ್ಣ ಮಗುವಲ್ಲ, ಈಗಾಗಲೇ ಡಿಗ್ರಿಗೆ ಬಂದುಬಿಟ್ಟಿದ್ದೀಯಾ. ಸ್ವಂತ ಆಲೋಚನೆ ಇದೆ ದುಡಿಯುವ ಶಕ್ತಿಯನ್ನು ಸಂಪಾದಿಸಿದ್ದೀಯ. ಈಗಲೂ ನಾನೇ ಬಂದು ಮಾತು ಹೇಳಬೇಕು ಅನ್ನೋದು ಎಷ್ಟು ಸರಿ. ಮೊದಲು ಕಣ್ಣುಬಿಟ್ಟು ಸುತ್ತಮುತ್ತ ನೋಡು ಕಣ್ಣುಮುಂದೆ ನಡೆಯುವ ಪ್ರತಿ ವಿಚಾರದಲ್ಲೂ, ಕಾಣುವ ಪ್ರತಿಯೊಂದು ಸನ್ನಿವೇಶದಲ್ಲೂ ಕಲಿಯುವ ವಿಚಾರಗಳು ಸಾಕಷ್ಟಿರುತ್ತವೆ. ಅದನ್ನು ಬಿಟ್ಟು 24 ಗಂಟೆ ಮೊಬೈಲ್ನಲ್ಲಿ ಕೂತ್ರೆ ಜಗತ್ತು ಕಾಣುವುದಿಲ್ಲ. ಮೊಬೈಲ್ಲೇ ಜಗತ್ತು ಅಲ್ಲ".
"ಸರಿಯಮ್ಮ ಅದೇನೋ ಸುತ್ತಮುತ್ತ ,ಏನೋ ಪಾಠ ಸಿಗುತ್ತೆ ಅಂತ ಹೇಳಿದ್ಯಲ್ಲ ಅದೇನು ಹೇಳು ನಾನು ಒಂದು ಸಲ ಕೇಳಿ ಬಿಡುತ್ತೇನೆ"
"ನಿನಗೆ ದೊಡ್ಡ ವಿಚಾರ ಬೇಡ, ದಿನಕ್ಕೆರಡು ಸಲ ಬಾವಿಯಿಂದ ನೀರು ಸೇದುತ್ತಿದ್ದೀಯಾ ಅಲ್ವಾ? ಅಲ್ಲಿ ಏನು ಕಲಿತಿದ್ದೀಯಾ "
"ಅಲ್ಲಿ ಕಲಿಯೋಕೆ ಏನಿದೆ, ನೀರು ಸೇದೋದು ಅಷ್ಟೇ"
"ಇದಕ್ಕೆ ಕಣ್ಣುಬಿಟ್ಟು ನೋಡಬೇಕು ಅಂತ ಹೇಳೋದು"
"ನೀನು ನೀರನ್ನ ಸೇದುವಾಗ ಹಗ್ಗವನ್ನು ಒಟ್ಟು ಎಳೆದು ಹಾಕಿಬಿಟ್ಟರೆ, ಮತ್ತೊಂದು ಸಲ ನೀರು ಸೇದುವಾಗ ಹಗ್ಗ ಸುಲಭವಾಗಿ ಬಾವಿಗೆ ಇಳಿಯುವುದಿಲ್ಲ. ಹಾಗಾಗಿ ಇಳಿಸಬೇಕಾದ ಹಗ್ಗವನ್ನು ಒಪ್ಪವಾಗಿ ಜೋಡಿಸಿಡಬೇಕು. ಆಗ ಸುಕ್ಕು ಗಳಿಲ್ಲದೆ ನಿಧಾನವಾಗಿ ಹಗ್ಗ ಬಾವಿಯೊಳಗೆ ಇಳಿಯುತ್ತದೆ. ಜೀವನ ಕೂಡ ಹಾಗೇನೆ ಸಂಬಂಧಗಳನ್ನು ಬಾಂಧವ್ಯಗಳನ್ನು ಯಾವತ್ತೂ ಸುಕ್ಕುಗಟ್ಟಿಸಲು ಹೋಗಬಾರದು. ಕೊನೆಗೆ ಬಿಡಿಸೋಕೆ ಆಗದೆ ಕಗ್ಗಂಟಾಗಿ ಬಿಡುತ್ತದೆ. ಕತ್ತರಿಸಿ ಎಲ್ಲವನ್ನು ಬಿಡಿಸಬೇಕಾದ ಪರಿಸ್ಥಿತಿ ನಿರ್ಮಾಣವಾಗುತ್ತದೆ. ನೀನದನ್ನ ಸರಿಯಾದ ರೀತಿಯಲ್ಲಿ ಪ್ರೀತಿಯಿಂದ ಮನಸ್ಸು ಇಟ್ಟು ಅಂದವಾಗಿ ಜೋಡಿಸಿದರೆ ಬಾಂಧವ್ಯವೂ ಚೆನ್ನಾಗಿರುತ್ತದೆ. ಸಂಬಂಧವೂ ಹೆಚ್ಚುಕಾಲ ಬಾಳಿಕೆ ಬರುತ್ತದೆ. ಯಾವುದೇ ರೀತಿಯಲ್ಲಿ ತುಂಡರಿಸುವ ಅವಶ್ಯಕತೆ ಇರುವುದಿಲ್ಲ ".ಇದು ಕಣ್ಣ ಮುಂದೆ ಕಾಣುವ ವಿಚಾರಗಳು .ಹಾಗಾಗಿ ಕಣ್ಣು ಬಿಟ್ಟು ನೋಡೋದು ನಿನಗೆ ಬಿಟ್ಟ ವಿಚಾರ" ಇಷ್ಟಂದಕೂಡ್ಲೆ ಮಗನಿಂದ ಇನ್ನೊಂದೇನು ಮಾತಿರಲಿಲ್ಲ. ಅವರಮ್ಮ ಅವರ ಮಗನಿಗೆ ಹೇಳಿದರೂ ನನಗೆ ಹೇಳಿದಂಗೆ ಅನ್ನಿಸ್ತು.
-ಧೀರಜ್ ಬೆಳ್ಳಾರೆ