ಸ್ಟೇಟಸ್ ಕತೆಗಳು (ಭಾಗ ೨೯೮) - ತುಂಬಿಸಿಕೊಳ್ಳೋಣ
ನಾನು ಕಲಿಯಬೇಕಿದೆ ಇನ್ನೂ. ನಮ್ಮ ಮನೆಯ ಪಾತ್ರಗಳ ತರಹ. ಅಮ್ಮ ಅಂಗಡಿಯಿಂದ ಖರೀದಿಸಿ ತಂದದ್ದು ಯಾವುದೋ ಒಂದು ವಿಚಾರಕ್ಕಾಗಿ ಅಂದರೆ ಯಾವುದೋ ಒಂದು ವಸ್ತುವನ್ನು ಇದರೊಳಗೆ ತುಂಬಿಸಬೇಕು ಅನ್ನುವ ಕಾರಣಕ್ಕೆ ಆದರೆ ಮನೆಗೆ ತಂದ ಮೇಲೆ ಅದು ಅದೇ ಒಂದು ಕಾರಣಕ್ಕೆ ಮಾತ್ರ ಬಳಕೆಯಾದದ್ದಲ್ಲ. ಖಾಲಿ ಪ್ಲಾಸ್ಟಿಕ್ ಡಬ್ಬಿ ಬೇರೆ ಬೇರೆ ತರಹದ ಅಡುಗೆ ಪದಾರ್ಥಗಳಿಗೆ ಜಾಗವನ್ನು ನೀಡಿದೆ, ಕೆಲವೊಂದು ಸಲ ಕಸಗಳಿಗೂ ಕೂಡಾ.
ಅಮ್ಮ ಚಹಾ ಕಾಯಿಸಲು ಎಂದು ತಂದ ಸ್ಟೀಲಿನ ಸಣ್ಣ ಪಾತ್ರೆ ಸಹ, ಹಾಲು ನೀರು, ಮೊಸರು, ಮಜ್ಜಿಗೆ ಹೀಗೆ ಬೇರೆ ಬೇರೆ ವಸ್ತುಗಳಿಗೆ ಬೇರೆ ಬೇರೆ ಪ್ರಮಾಣದಲ್ಲಿ ಆಶ್ರಯವನ್ನು ನೀಡಿದೆ. ಯಾವುದೇ ವಸ್ತುಗಳನ್ನು ಅದಕ್ಕೆ ಹಾಕಿದ್ರು ಅದು ತನ್ನ ಸ್ವರೂಪವನ್ನೇನು ಬದಲಿಸಿಕೊಂಡಿಲ್ಲ. ಹಾಗೇ ಉಳಿದುಬಿಟ್ಟಿದೆ. ಮತ್ತೆ ನಮ್ಮ ಮನೆಯಲ್ಲಿ ಇನ್ನೊಂದಷ್ಟು ಖಾಲಿ ಪಾತ್ರೆಗಳು ಹಾಗೆ ಬಿದ್ದಿವೆ ಅದರೊಳಗೆ ಏನು ತುಂಬಿಸಿಯೂ ಇಲ್ಲ. ಯಾವುದನ್ನೋ ತುಂಬಿಸಬೇಕು ಎಂದು ತಂದ ಖಾಲಿ ಪಾತ್ರೆ ಅದೇ ಕಾರ್ಯಕ್ಕೆ ಬಳಕೆ ಆಗಿದೆ, ಆಗದೆಯೂ ಇದೆ. ಹೀಗಿರುವಾಗ ನಾನು ಹೀಗೆ ಮಾತ್ರ ಇರಬೇಕು ಇದನ್ನ ಮಾತ್ರ ಕಲಿಬೇಕು, ಇದನ್ನ ಮಾತ್ರ ಅನುಸರಿಸಬೇಕು ಅನ್ನೋದು ಎಷ್ಟು ಸರಿ. ನನ್ನ ಆಕಾರ ಒಂದೇ ಆದ್ರೂ ನನ್ನೊಳಗೆ ತುಂಬುವ ವಿಚಾರಗಳು ಯಾವುದಾದರೂ ಆಗಿರಬಹುದು. ಹಾಗಾಗಿ ತುಂಬಿಸಿಕೊಳ್ಳುವುದನ್ನು ಕಲಿಬೇಕು. ಪಾತ್ರೆಗೆ ಅದನ್ನು ಆಸ್ವಾದಿಸಲು ಆಗುವುದಿಲ್ಲ, ನಮಗೆ ಹಾಗಲ್ಲವಲ್ಲ. ಬೇಕಾದ್ರೆ ಪಡೆದುಕೊಳ್ಳೋಣ ಬೇಡದಿದ್ರೆ ಚೆಲ್ಲಿ ಬಿಡೋಣ. ಆ ಕಾರಣಕ್ಕೆ ಪಾತ್ರೆಯೇ ವ್ಯರ್ಥ ಅನ್ನೋದು ತಪ್ಪಲ್ವಾ. ನಾನು ತುಂಬಿಸಿಕೊಳ್ಳುತ್ತೇನೆ. ನನ್ನ ಅಗತ್ಯಕ್ಕೆ ಬೇಕಾಗಿ ಬಳಸಿಕೊಳ್ಳುತ್ತೇನೆ. ಇದು ನನ್ನ ಬದುಕು…
-ಧೀರಜ್ ಬೆಳ್ಳಾರೆ
ಸಾಂಕೇತಿಕ ಚಿತ್ರ ಕೃಪೆ: ಇಂಟರ್ನೆಟ್ ತಾಣ