ಸ್ಟೇಟಸ್ ಕತೆಗಳು (ಭಾಗ ೨೯೯) - ನೋವು-ಚಿಗುರು

ಸ್ಟೇಟಸ್ ಕತೆಗಳು (ಭಾಗ ೨೯೯) - ನೋವು-ಚಿಗುರು

ನಮ್ಮ ಕಾಲೇಜಿನ ಕಟ್ಟಡ ಏರಿಸುವ ಕೆಲಸ ತುಂಬಾ ದಿನಗಳಿಂದ ನಡೆಯುತ್ತಿದೆ. ಕಟ್ಟಡ ಏರಿಸುತ್ತಿರುವಾಗ ಮೇಲಿರುವ ಒಂದಷ್ಟು ವ್ಯರ್ಥವಾದವುಗಳನ್ನ ಕೆಳಗೆ ಎಸಿಯಲೇಬೇಕು. ಹಾಗಾಗಿ ಕಬ್ಬಿಣದ ತುಂಡುಗಳು, ಸಿಮೆಂಟಿನ ದೊಡ್ಡ ದೊಡ್ಡ ಇಟ್ಟಿಗೆಗಳು, ಧೂಳು, ಮರಳು, ಕಲ್ಲು ಎಲ್ಲವೂ ಕೂಡ ಎತ್ತರದಿಂದಲೇ ನೆಲಕ್ಕೆ  ನೆಲಕ್ಕೆ ಧುಮುಕುತ್ತಿದೆ. ಹಾಗೆ ಧುಮುಕುವ  ಒಂದು ಜಾಗದಲ್ಲಿ ಹಲವು ವರ್ಷಗಳಿಂದ ಗಟ್ಟಿಯಾಗಿ ನಿಂತಿರುವ ಒಂದು ಪುಟ್ಟ ಮಾವಿನ ಮರವಿದೆ. 

ಆ ಮರ ಈ ಕಟ್ಟಡದ ಕೆಲಸ ಆರಂಭವಾದಾಗಿನಿಂದ ಹಿಡಿದು ಇಂದಿನವರೆಗೂ ದಿನವೂ ನೋವನ್ನ ಅನುಭವಿಸುತ್ತಾ ಬದುಕುತ್ತಿದೆ. ಪ್ರತಿದಿನವೂ ಅದರಮೇಲೆ ದೊಡ್ಡ ದೊಡ್ಡ ಕಲ್ಲು, ಕಬ್ಬಿಣ ಎಲ್ಲವೂ ಪಟಪಟನೆ ಬಡಿದು ಬೀಳುತ್ತಿವೆ. ಅದು ನೋವಿನಿಂದಲೇ ತನ್ನ ಅಂಗಗಳನ್ನು ಕಳೆದುಕೊಂಡಿದೆ. ಅದರ ಕೂಗು ನಮಗೆ ಕೇಳಿಸುತ್ತಿಲ್ಲವಷ್ಟೇ. ಪ್ರತಿದಿನವೂ ಅದರ ಮೇಲೆ ದೊಡ್ಡ ದೊಡ್ಡ ಕಲ್ಲುಗಳು ಬಿದ್ದು ಎಲೆಗಳು ಹರಿದು ಚೂರಾಗಿದೆ, ಚರ್ಮ ಸುಲಿದಿದೆ, ಚಿಗುರುಗಳು ಮುರುಟಿ ಹೋಗಿದೆ, ಕೊಂಬೆಗಳು ತುಂಡಾಗಿ ನೇತಾಡುತ್ತಿವೆ ,ಕೆಲವು ತುಂಡಾಗಿ ಉದುರಿ ಬಿಟ್ಟಿದೆ, ಹೀಗಿದ್ದರೂ ಕೂಡ ಇನ್ನೊಂದಷ್ಟು ಚಿಗುರುಗಳನ್ನು ಹುಟ್ಟಿಸಿ ಹೂ ಬಿಟ್ಟಿದೆ. ಅದನ್ನ ಕಾಯಾಗಿಸಿದೆ. ಪ್ರತಿದಿನವೂ ನೋವನ್ನ ಅನುಭವಿಸಿಯೂ ಕೂಡ ತನ್ನ ಕೆಲಸ ಮಾಡುವುದನ್ನು ಬಿಟ್ಟಿಲ್ಲ. ಈ ಮಣ್ಣಿನಿಂದ ಪಡೆದುಕೊಂಡ ಸತ್ವವನ್ನು ಹಂಚಬೇಕು ಅನ್ನುವ ಆಸೆಯಿಂದ ಪುಟ್ಟ ಪುಟ್ಟ ಮಿಡಿಗಳನ್ನು ಅರಳಿಸುತ್ತಿದೆ. ಕಲಿಯಬೇಕಿರುವುದಿಷ್ಟೇ. ನೋವನ್ನು ಅನುಭವಿಸಿದರೂ, ಪ್ರತಿದಿನವೂ ಅನುಭವಿಸುತ್ತಿದ್ದರೂ, ಒಳ್ಳೆಯದನ್ನು ಮಾಡು ಮತ್ತು ಬಯಸು ಮತ್ತೆ ಮೇಲೆದ್ದು ನಿಲ್ಲು. ಒಳಿತು ಒಂದಲ್ಲ ಒಂದು ದಿನ ನಿನ್ನನ್ನ ಹುಡುಕಿಕೊಂಡು ಬರುತ್ತದೆ.

-ಧೀರಜ್ ಬೆಳ್ಳಾರೆ

ಚಿತ್ರ ಕೃಪೆ: ಇಂಟರ್ನೆಟ್ ತಾಣ