ಸ್ಟೇಟಸ್ ಕತೆಗಳು (ಭಾಗ ೩೦೦) - ಹಿರಿಯರು

ಸ್ಟೇಟಸ್ ಕತೆಗಳು (ಭಾಗ ೩೦೦) - ಹಿರಿಯರು

ಮನೆಯಲ್ಲಿ ಹಿರಿಯರು ಇರಲೇಬೇಕು. ಇದು ನಾನು ಆಗಾಗ ಕೇಳುತ್ತಿದ್ದ ಮಾತು. ಅವರು ಬುದ್ಧಿ ಹೇಳುತ್ತಾರೆ ಅಂತ ಅನ್ಕೊಂಡಿದ್ದೆ, ಆದರೆ ಅದಕ್ಕಿಂತ ಹೆಚ್ಚಾಗಿ ಸಂಬಂಧಗಳನ್ನು ಜೋಡಿಸುತ್ತಾರೆ ಅಂತ ಗೊತ್ತಿರಲಿಲ್ಲ. ನಮ್ಮನೆಯಲ್ಲಿ ಗೋಪಮ್ಮ ಅಜ್ಜಿ ನಮ್ಮ ಇಡೀ ಕುಟುಂಬದ ಹಿರಿಯ ಜೀವ. ಅವರನ್ನು ಎಲ್ಲರೂ ಪ್ರೀತಿಯಿಂದ ಡಾರ್ಲಿಂಗ್ ಅಂತ ಕರೀತಾರೆ. ಹಲ್ಲುಗಳು ಹಲವು ಉದುರಿಹೋಗಿದೆ, ಮೃದು ಕೆನ್ನೆ ಸ್ವಲ್ಪ ಒಳಕ್ಕಿಳಿದಿದೆ. ನಗು ಮತ್ತಷ್ಟು ಹೆಚ್ಚಿದೆ. ಮನೆಯಲ್ಲಿ ಆಗಾಗ ಕಾರ್ಯಕ್ರಮಗಳು ಆಗಬೇಕು ಅಂತ ಬಯಸೋರು, ಬಂದವರನ್ನೆಲ್ಲ ಮಾತಾಡಿಸುತ್ತಾರೆ. ಹೆಚ್ಚಾಗಿ ಮಕ್ಕಳನ್ನು. ಮಕ್ಕಳಿಗೆ ಮನೆಯವರನ್ನೆಲ್ಲ ಪರಿಚಯ ಮಾಡಿಕೊಟ್ಟು ಸಂಬಂಧ ಏನು ಅನ್ನೋದನ್ನ ತಿಳಿಸಿಕೊಡುತ್ತಾರೆ. ಅವರು ಹೇಳುವುದಿಷ್ಟೇ "ಮಗಾ ಅಪ್ಪ-ಅಮ್ಮ ಅಜ್ಜ-ಅಜ್ಜಿ ಚಿಕ್ಕಪ್ಪ ದೊಡ್ಡಪ್ಪ ಅಕ್ಕ ಇದು ಮಾತ್ರ ಸಂಬಂಧಗಳಲ್ಲ ಇನ್ನು ಹಲವು ಸಂಬಂಧಗಳಿವೆ. ಅವರನ್ನು ಆ ಸಂಬಂಧದ ಹೆಸರಿನಿಂದಲೇ ಕರೆದು ಮಾತಾಡಿಸು ಆಗ ಬಾಂಧವ್ಯ ಇನ್ನಷ್ಟು ಗಟ್ಟಿಯಾಗುತ್ತದೆ. ನಾಲ್ಕು ಜನ ನಾಲ್ಕು ಗೋಡೆಯ ನಡುವೆ ಈಗ ಬದುಕುತ್ತಾ ಇದ್ದಾರೆ. ಆದರೆ ಆಗಾಗ ಮೂಲಗೂಡಿಗೆ ಮರಳಿ ಎಲ್ಲರನ್ನು ಮಾತಾಡಿಸಿ ಆಶೀರ್ವಾದ ಹಾರೈಕೆಯನ್ನು ಪಡ್ಕೊಂಡು ನಾಲ್ಕು ಗೋಡೆಯೊಳಗೆ ಸೇರ್ಕೋಬೇಕು". ಇಷ್ಟು ಹೇಳಿ ನಗುನಗುತ್ತ ಇನ್ನೊಂದಷ್ಟು ಜನರನ್ನು ಪರಿಚಯಿಸಲು ಹೊರಟೇಬಿಟ್ಟರು. ಈ ಸಂಬಂಧಗಳನ್ನು ಸಂಭ್ರಮವನ್ನು ಹಂಚುವುದಕ್ಕಾಗಿ ಮನೆಯಲ್ಲಿ ಹಿರಿಯರು ಇರಲೇಬೇಕು.

-ಧೀರಜ್ ಬೆಳ್ಳಾರೆ

ಚಿತ್ರ ಕೃಪೆ: ಇಂಟರ್ನೆಟ್ ತಾಣ