ಸ್ಟೇಟಸ್ ಕತೆಗಳು (ಭಾಗ ೩೦೧) - ಬಟ್ಟೆ
ಅಲ್ಲಿ ಗದ್ದೆಯಲ್ಲಿ ಬೆಳೆದ ಹತ್ತಿಗೆ ಗೊತ್ತಿಲ್ಲ ತಾನು ಎಲ್ಲಿಗೆ ಹೋಗಿ ಸೇರುತ್ತೇನೆ ಎನ್ನುವ ಸತ್ಯ. ನೆಲದೊಳಗಿನ ಸತ್ವವನ್ನು ಗಿಡವು ಹೀರಿಕೊಂಡು ಹೂವಿಗೆ ನೀಡುತ್ತದೆ. ಹೂವು ಕಾಯಾಗಿ, ಕಾಯಿ ಹತ್ತಿಯಾಗುತ್ತದೆ. ಜೋರು ಗಾಳಿಗೂ ತನ್ನ ಸ್ಥಿಮಿತ ಕಳೆದುಕೊಳ್ಳದೆ ಆ ಗಿಡವನ್ನೇ ಅಪ್ಪಿ ಹಿಡಿದುಕೊಂಡ ಹತ್ತಿ ರೈತ ಬರುವಾಗ ತನ್ನನ್ನು ಅವನು ತಂದಿರುವ ಬುಟ್ಟಿಗೆ ಅರ್ಪಿಸಿಕೊಳ್ಳುತ್ತದೆ. ಅಲ್ಲಿಂದ ತೆರಳಿದ ನಂತರ ತನ್ನ ಸ್ವರೂಪ ಬದಲಾವಣೆಗೆ ಬೇರೆ ಬೇರೆ ತರದ ಪರೀಕ್ಷೆಗಳನ್ನು ಎದುರಿಸಿ ಕೊನೆಗೆ ಬಟ್ಟೆಯಾಗಿ ಸಿದ್ಧವಾಗುತ್ತದೆ. ಹೀಗೆ ಸಿದ್ಧವಾದ ಬಟ್ಟೆ ಯಾರ ಬಳಿಗೆ ತಲುಪುತ್ತದೆ ಅನ್ನೋದು ಬಟ್ಟೆಗೂ ಗೊತ್ತಿಲ್ಲ .
ಧರಿಸಿದವರು ಶುಭ್ರ ಮನಸ್ಸಿನವನಾಗಿರಬಹುದು, ಕೆಟ್ಟ ಅಲೋಚನೆಯನ್ನು ಹೊಂದಿರಬಹುದು, ಕೊಲೆಗಾರ, ಮೋಸಗಾರ, ಶೂರ, ಬಡವ, ಧನಿಕ, ರಾಜಕಾರಣಿ, ಪೋಲೀಸ್ಯಾರು ಬೇಕಾದರೂ ಆಗಿರಬಹುದು. ಆದರೆ ಬಟ್ಟೆ ನಾನು ಬೆಳೆದ ವಾತಾವರಣದಿಂದ ಪಡೆದುಕೊಂಡ ವಿಚಾರಗಳನ್ನ ತನ್ನನ್ನು ಧರಿಸಿರುವ ವ್ಯಕ್ತಿಗೆ ತಿಳಿಸುವುದಿಲ್ಲ. ತಿಳಿಸೋಕೆನಾದ್ರೂ ಆಗಿದ್ದಿದ್ದರೆ ಒಂದಷ್ಟು ತಪ್ಪುಗಳ ದಾರಿಗಳನ್ನು ಬಟ್ಟೆ ತಿಳಿಸಿ ಕೊಡುತ್ತಿತ್ತೋ ಏನೋ. ನಾವು ಅದನ್ನ ನೀರಲ್ಲಿ ಹಾಕ್ತವೆ, ಹಿಂಡುತ್ತೇವೆ, ಉಜ್ಜುತ್ತೇವೆ. ಕೊನೆಗೆ ಅದರ ಸ್ವರೂಪವನ್ನೇ ಬದಲಿಸಿಬಿಡುತ್ತೇವೆ. ಆದರೂ ಬಟ್ಟೆ ನಮ್ಮ ಮಾನವನ್ನು ಮುಚ್ಚುತ್ತದೆ. ನಮಗೊಂದು ಘನತೆಯನ್ನ ನೀಡುತ್ತದೆ. ಹೀಗಿರುವಾಗ ಅದು ಬಯಸಬಹುದು, ಒಂದಷ್ಟು ಗೌರವವನ್ನು ಪ್ರೀತಿಯನ್ನು .ಅದನ್ನ ನಾವು ನೀಡಿದರೆ ಅದು ರೈತನ ಗದ್ದೆಯಲ್ಲಿ ಬಿಸಿಲಿನ ತಾಪವನ್ನು ಸಹಿಸಿಕೊಂಡು ನಿಂತಿದ್ದಕ್ಕೆ, ಬೇರೆ ಬೇರೆ ಸಂಸ್ಕರಣಾ ವಿಧಾನಗಳಿಗೆ ಒಳಪಡಿಸಿಕೊಂಡದ್ದಕ್ಕಾದರೂ ಮೌಲ್ಯ ಸಿಗಬಹುದು ಅಲ್ವಾ ?.
-ಧೀರಜ್ ಬೆಳ್ಳಾರೆ
ಚಿತ್ರ ಕೃಪೆ: ಇಂಟರ್ನೆಟ್ ತಾಣ