ಸ್ಟೇಟಸ್ ಕತೆಗಳು (ಭಾಗ ೩೦೩) - ಕೇಳಬೇಕಿದೆ

ಸ್ಟೇಟಸ್ ಕತೆಗಳು (ಭಾಗ ೩೦೩) - ಕೇಳಬೇಕಿದೆ

ಕೊರಗು  ಯಾರಿಗಿಲ್ಲ ಹೇಳಿ? ಪ್ರತಿಯೊಬ್ಬರಿಗೂ ಒಂದೊಂದು ತರಹದ ಕೊರಗು ಇದ್ದೇ ಇರುತ್ತೆ. ರಾಜೇಶನದ್ದು ಅಷ್ಟೊಂದು ದೊಡ್ಡ ಕೊರಗೇನಲ್ಲ. ರಾಜೇಶ ಸದ್ಯಕ್ಕೆ ಇರುವ ಊರು ಅವನು ಹುಟ್ಟಿದೂರಲ್ಲ, ಬೆಳೆದ ಊರಲ್ಲ. ಸದ್ಯಕ್ಕೆ ದುಡಿದು ಬದುಕುವ ಊರಿದು. ಇಲ್ಲಿ ಬದುಕುತ್ತಿರುವ ರಾಜೇಶನಿಗೆ ಜೀವನದಲ್ಲಿ ಒಂದೇ ದೊಡ್ಡ ಕೊರಗು ಅದೇನು ಅಂತ ಅಂದರೆ ಅವನು ಇಲ್ಲಿ ಯಾವುದೇ ಕಾರ್ಯಕ್ರಮದ ವೇದಿಕೆಯನ್ನೇರಿದಲ್ಲಿ ಚಪ್ಪಾಳೆ, ಸಿಳ್ಳೆಗಳು ಕೇಳಿಸುತ್ತವೆ. ಅವನು ಬರವಣಿಗೆಗೆ ಹೊಸತರದ ಸಾಹಿತ್ಯಲೋಕ ಸೃಷ್ಟಿಯಾಗುತ್ತೆ .ಅಭಿನಯದಲ್ಲಿ ಎಲ್ಲರ ಕಣ್ಣಂಚಲ್ಲಿ ಹನಿ ನೀರು ಜಿನುಗುತ್ತದೆ. 

ಅವನ ಹೆಸರು ಕೇಳಿದ ಕ್ಷಣ ಈಗ ಸದ್ಯ ಬದುಕುತ್ತಿರುವ ಊರಿನಲ್ಲಿ ಹಲವಾರು ಜನರಿಗೆ ಅವನ್ಯಾರು ಅಂತ ಗೊತ್ತಿದೆ, ಆದರೆ ರಾಜೇಶನಿಗೆ ಅದೊಂದೇ ಮುಖ್ಯ ಅಲ್ಲ. ಅವನಿಗೆ ವೇದಿಕೆಯಲ್ಲಿ ನಿಂತಾಗ ಕೇಳುವ ಸಿಳ್ಳೆ ಹೊಡೆಯುವ ಚಪ್ಪಾಳೆಯ ಕಂಪನದ ಶಬ್ದ ಮೌನವಾಗಿರುವ ಇವನ ಊರಿಗೂ ತಲುಪಬೇಕು. ಅಲ್ಲಿ ಮನೆ ಕೆಲಸಗಳಿಗೆ ಹೋಗಿ ದುಡಿಯುತ್ತಿರುವ ಅಪ್ಪ-ಅಮ್ಮನಿಗೂ ಕೇಳಿಸಬೇಕು. "ಏನು ಮಾಡುತ್ತಿದ್ದೀಯಾ"! ಅಂತ ಹಂಗಿಸೋ ಊರಿನವರ ಕಿವಿಯನ್ನು ಒಮ್ಮೆ ಸ್ಪರ್ಶಿಸಿ ಬರಬೇಕು. ಆತ ಕಾಯುತ್ತಿದ್ದಾನೆ. ದಿನವೊಂದು ಬರುತ್ತದೆ ಚಪ್ಪಾಳೆ ಶಿಳ್ಳೆ ಸನ್ಮಾನಗಳ ಸದ್ದು ಊರಿನ ಬಾಗಿಲುಗಳನ್ನು ತಟ್ಟುತ್ತದೆ. ಶ್ರಮಜೀವಿಗಳಾದ ಅಪ್ಪ-ಅಮ್ಮನ ಗೌರವ ಇನ್ನೊಂದು ಚೂರು ಹೆಚ್ಚುತ್ತದೆ. ಆ ಕ್ಷಣಕ್ಕಾಗಿ ಕಾಯುತ್ತಿದ್ದಾನೆ. ಶಬ್ದವನ್ನ ದಾಟಿಸೋಕೆ ಇಲ್ಲಿ ವಾಹಿನಿಗಳ ಕೊರತೆಯೋ ಅಥವಾ ಊರಿನಲ್ಲಿ ಶಬ್ದ ಗ್ರಹಿಕೆಯ ಕೊರತೆಯೂ ಗೊತ್ತಾಗುತ್ತಿಲ್ಲ. ಒಟ್ಟಿನಲ್ಲಿ ಶಬ್ದ ಅಲ್ಲಿಗೆ ಕೇಳಿಸುತ್ತಿಲ್ಲ.

-ಧೀರಜ್ ಬೆಳ್ಳಾರೆ

ಚಿತ್ತ ಕೃಪೆ: ಇಂಟರ್ನೆಟ್ ತಾಣ