ಸ್ಟೇಟಸ್ ಕತೆಗಳು (ಭಾಗ ೩೦೪) - ಗುಬ್ಬಿಯ ಮಾತು

ಸ್ಟೇಟಸ್ ಕತೆಗಳು (ಭಾಗ ೩೦೪) - ಗುಬ್ಬಿಯ ಮಾತು

ಊರು ಬಿಡಿಸಿದವರು ನೀವು. ನನಗೆ ಅಲ್ಲಿ ಬದುಕೋಕೆ ಸಾಧ್ಯವಾಗದೆ ಇರುವ ಪರಿಸ್ಥಿತಿ ನಿರ್ಮಿಸಿ ನಮ್ಮ ಹಲವು ಜನರ ಸಾವಿಗೆ ಕಾರಣವಾದವರು ನೀವು. ನಾವು ನಿಮ್ಮ ಸಹವಾಸವೇ ಬೇಡ ಅಂತ ಊರುಬಿಟ್ಟು ಇಲ್ಲಿ ನೆಮ್ಮದಿಯಾಗಿ ಬದುಕೋಕೆ ಆರಂಭ ಮಾಡಿದ್ರೆ ಇಲ್ಲಿಗೂ ಬರ್ತಾ ಇದ್ದೀರಲ್ಲ. ನಿಮಗೆ ಒಂದು ಚೂರು ಮನುಷ್ಯತ್ವ ಅನ್ನೋದೇ ಇಲ್ವಾ? ನಿಮಗೆ ಯಾಕೆ ಮನುಷ್ಯ ಅಂತ ಕರೆಯುತ್ತಾರೆ. ನಾವಲ್ಲಿ ಕಾಳು ಕಸಕಡ್ಡಿಗಳನ್ನು ತಿಂದುಕೊಂಡು ಸ್ವಚ್ಛಂದವಾಗಿ ಹಾರಿಕೊಂಡು ಜೀವಿಸ್ತಾ ಇದ್ವಿ. ನೀವು ನೋಡಿ ಖುಷಿ ಪಡ್ತಾ ಇದ್ರಿ. ಆಮೇಲೆ ಅದ್ಯಾವುದು ಮೊಬೈಲ್ ಅಂತ ತಗೊಂಡ್ ಬಂದು ನಮ್ಮ ಸಾವಿಗೆ ಕಾರಣ ಆಗ್ತಾ ಇರುವಾಗ ಊರುಬೇಡ ಕಾಡು ಸಾಕು ಅಂತ ಜನರೇ ಇಲ್ಲದ ಹಸಿರನ್ನೇ ಹೊಂದಿರುವ ಕಾಡಿನ ನಡುವೆ ಬಂದು ಕಷ್ಟಪಟ್ಟು ಬದುಕೋಕೆ ಶುರುಮಾಡಿದೆವು. ಒಂದಷ್ಟು ದಿನ ಕಷ್ಟ ಆಯ್ತು ಆದ್ರೆ ಯಾರ ತೊಂದರೆಯೂ ಇರಲಿಲ್ಲ. ನಿಧಾನವಾಗಿ ಹೊಸ ವಾತಾವರಣಕ್ಕೆ ಒಗ್ಗಿಕೊಂಡೆವು ಬದುಕು ಚೆನ್ನಾಗಿತ್ತು. ಆಮೇಲೆ ನೀವು ಇಲ್ಲಿಗ್ಯಾಕೆ ಬಂದಿರೋ ಗೊತ್ತಾಗ್ತಾ ಇಲ್ಲ. ನಿಮಗೆ ದುಡ್ಡು ಇನ್ನಷ್ಟು ಬೇಕು ಅನ್ನೋ ಕಾರಣಕ್ಕೆ ಹೋಗಿ ಎಲ್ಲಾದರೂ ಕೆಲಸ ಮಾಡಿ ಅದು ಬಿಟ್ಟು ಈ ಭೂಮಿಯನ್ನು ಮತ್ತಷ್ಟು ಕೊರೆಯೋ ಕೆಲಸ ಮಾಡಿ ಅದೇನು ಸಾಧನೆ ಮಾಡ್ತಿರೋ ?  ಇಲ್ಲಿಂದ ಕಲ್ಲುಗಳನ್ನು ಅದೆಲ್ಲಿಗೆ ಸಾಗಿಸಿ ಕಾಂಕ್ರೀಟ್ ಕಾಡುಗಳನ್ನು ಕಟ್ಟುತ್ತಿದ್ದೀರಾ? ನಿಮ್ಮ ದೊಡ್ಡ ದೊಡ್ಡ ಮಿಷನ್ ಗಳು ಇಲ್ಲಿ ಉಗುಳುತ್ತಿರುವ ಹೊಗೆಯಿಂದ ಉಸಿರಾಟ ಕಷ್ಟವಾಗಿದೆ, ಧೂಳಿನಿಂದ ಹಸಿರು ಮಣ್ಣಿನ ಬಣ್ಣಕ್ಕೆ ತಿರುಗಿ ಬಿಟ್ಟಿದೆ. ನಮಗೆ ಗೂಡುಗಳಿಗೆ ಜಾಗವಿಲ್ಲ, ಹಸಿರಿಲ್ಲದೆ ಉಸಿರಾಟ ಇಲ್ಲ. ನಮ್ಮ ಕಣ್ಣಿಗೂ ಧೂಳು ಕವಿದು ಸುತ್ತಮುತ್ತ ಏನು ಕಾಣಲಾಗದೇ ನಮ್ಮವರು ಹಲವಾರು ಉಪವಾಸದಿಂದ ಸತ್ತರು. ಗಿಡಗಳು ಬೋಳಾಗುತ್ತಿವೆ. ನೀವು ಎಲ್ಲಿ ಹೋದರೆ ನಮ್ಮನ್ನು ಬದುಕಲು ಬಿಡುತ್ತೀರಾ ಅದನ್ನಾದರೂ ತಿಳಿಸಿ. ನಿಮಗೆ ಅದ್ಯಾಕೋ ದೇವರು ಯೋಚನೆ ಅನ್ನೋದನ್ನ ಬುದ್ಧಿ ಅನ್ನೋದನ್ನು ಕೊಟ್ರು ಗೊತ್ತಿಲ್ಲ. ಒಳ್ಳೇದು ಬಿಟ್ಟು ಎಲ್ಲದಕ್ಕೂ ಬಳಸುತ್ತಿದ್ದೀರಾ. ಒಮ್ಮೆ ನಮ್ಮಕಾಡು ಬಿಟ್ಟು ಹೋಗಿ ನೀವು.  ನಿಮಗಲ್ಲಿ ಊರು ಅಂತ ನಿರ್ಮಿಸಿದ ಮೇಲೆ ಅಲ್ಲೇ ಬಿದ್ದು ಸಾಯ್ರಿ, ಇಲ್ಲಿ ಬಂದು ನಮ್ಮನ್ನು ಸಾಯಿಸಬೇಡಿ…

-ಧೀರಜ್ ಬೆಳ್ಳಾರೆ