ಸ್ಟೇಟಸ್ ಕತೆಗಳು (ಭಾಗ ೩೦೭) - ಪ್ರೀತಿ
ಬಿಟ್ಟು ಹೊರಡುತ್ತಾರೆ ಎಲ್ಲಾ. ಯಾರು ಕೊನೆವರೆಗೂ ಕೈ ಹಿಡಿದು ನಡೆಯೋದಿಲ್ಲ. ಮನಸ್ತಾಪಗಳಾದಾಗ ಮನಸ್ಸಿನಿಂದ ದೂರವಾಗ್ತಾರೆ, ಮರಣಹೊಂದಿದಾಗ ಮರಣದವರೆಗೆ ಬಿಟ್ಟುಬರುತ್ತಾರೆ, ಉಪಯೋಗವಿಲ್ಲದಾಗ ತ್ಯಜಿಸಿ ಹೊರಡುತ್ತಾರೆ, ಕಾರಣವೇ ಗೊತ್ತಿಲ್ಲದೆ ಮಾಯವಾಗುತ್ತಾರೆ, ಮೋಸ ಮಾಡಿ ಮೂಲೆಗೆ ಎಸೆಯುತ್ತಾರೆ, ಹೀಗೆ ಒಂದೊಂದು ಕಾರಣಕ್ಕೆ ನಡೆದಾಡುವ ಜೀವಿಯಾದ ಮನುಷ್ಯರು ತೊರೆದು ಹೊರಡುತ್ತಾರೆ. ಅವತ್ತು ಮನೆಯ ಅಂಗಳದಿಂದ ಹೊರಗೆ ಕಾಲಿಟ್ಟಾಗ ಅಲ್ಲೆರಡು ಚಿಟ್ಟೆಗಳು ಹಾರಾಡುತ್ತಾ ಇದ್ದವು. ದಿನವೂ ಗಮನಿಸುವುದೇ, ಹಾಗಾಗಿ ಹೊರಗೇನೋ ಕೆಲಸ ಮುಗಿಸಿ ಮತ್ತೆ ಮನೆಯೊಳಕ್ಕೆ ಕಾಲಿಡಬೇಕು ಎನ್ನುವಷ್ಟರಲ್ಲಿ ನೀಲಿ ಬಣ್ಣದ ಚಿಟ್ಟೆ ಮರಣ ಹೊಂದಿತ್ತು. ಯಾವುದೋ ಬೆಕ್ಕು ಜೋರಿನಿಂದ ಹೊಡೆದಿತ್ತೋ ಏನೋ. ನೆಲದಲ್ಲಿ ಒದ್ದಾಡಿ ಸತ್ತು ಹೋಗಿತ್ತು. ಆದರೆ ಅದರ ಪಕ್ಕದಲ್ಲಿ ಸಂಗಾತಿಯಾಗಿದ್ದ ಇನ್ನೊಂದು ಚಿಟ್ಟೆ ಸುತ್ತುತ್ತಲೇ ಇತ್ತು.
ಗಂಟೆಗಳು ಕಳೆದರೂ ಸಂಗಾತಿ ಅದನ್ನ ತೊರೆದು ಹೊರಡುತ್ತಿಲ್ಲ. ಮತ್ತೆ ಮತ್ತೆ ಹತ್ತಿರ ಬಂದು ಏನೋ ಪಿಸುಗುಟ್ಟುತ್ತಿದೆ. ರೆಕ್ಕೆಯಿಂದ ಅದರ ರೆಕ್ಕೆಗೆ ನಿಧಾನವಾಗಿ ಬಡಿಯುತ್ತಿದೆ ಮತ್ತೆ ಅದರ ಮುಖದ ಹತ್ತಿರ ನಿಂತು ಏನೇನೋ ಬೇಡುತ್ತಿದೆ ಮತ್ತೆ ಹಾರುತಿದೆ ಪಕ್ಕದಲ್ಲಿ ಬಂದು ಕುಳಿತುಕೊಳ್ಳುತ್ತಿದೆ. ಪ್ರಯತ್ನಗಳು ಹಲವು ಹಂತಗಳಲ್ಲಿ ಮುಂದುವರೆದರೂ ಸತ್ಯ ಜೀವ ಬದುಕಲಿಲ್ಲ ದೇವರು ಕರುಣೆಯಿಂದ ಆದರೂ ಬದುಕಿಸಬೇಕಿತ್ತು ಅದು ಸಾಧ್ಯವಾಗಲಿಲ್ಲ. ಅದು ಬಿಟ್ಟು ಹೊರಡುತ್ತಾನೆ ಇಲ್ಲ. ಎಲ್ಲೋ ಇರುವ ಇರುವೆಗೆ ಶವದ ವಾಸನೆ ಬಂತೋ ಏನೋ ಗುಂಪುಕಟ್ಟಿ ಹುಡುಕಿಕೊಂಡು ಬಂದು ಇದನ್ನ ಎತ್ತಿಕೊಂಡು ಅದರ ಗೂಡಿಗೆ ಹೊರಟಾಗಲೂ ಅದರ ಹಿಂದೆಯೇ ಹಾರಿತು. ಇರುವೆ ಗೂಡಿನ ಬಳಿಯೇ ಕುಳಿತಿತ್ತು. ಮರುದಿನ ಬೆಳಕಾಯಿತು. ಚಿಟ್ಟೆ ತನ್ನ ಸಂಗಾತಿ ಚಿಟ್ಟೆಗಾಗಿ ಕಾಯುತ್ತಿದೆ ಅಲ್ಲಿಯೇ. ಮೂಕ ಮನಸ್ಸಿನ ಅದರೊಳಗೆ ದ್ವೇಷ-ಅಸೂಯೆ ಮನಸ್ತಾಪ ಕಪಟ ಇದ್ಯಾವುದೂ ಇಲ್ಲ ಇರೋದು ಒಂದೇ ಪ್ರೀತಿ. ನಾವು ಯಾವಾಗ ಅರಿತುಕೊಳ್ಳುವುದು ಇದನ್ನ…
-ಧೀರಜ್ ಬೆಳ್ಳಾರೆ
ಚಿತ್ರ ಕೃಪೆ: ಇಂಟರ್ನೆಟ್ ತಾಣ