ಸ್ಟೇಟಸ್ ಕತೆಗಳು (ಭಾಗ ೩೧೦) - ಕಾಲ

ಸ್ಟೇಟಸ್ ಕತೆಗಳು (ಭಾಗ ೩೧೦) - ಕಾಲ

ಮನೆಯ ಹಿರಿಜೀವ ಅವರು. ತನ್ನ ಯೌವ್ವನದ ಕಾಲದಲ್ಲಿ ಊರಿಡೀ ತಿರುಗಾಡಿ ಪ್ರತಿಯೊಬ್ಬರನ್ನು ಮಾತಾಡಿಸಿ ಕಷ್ಟ-ಸುಖಕ್ಕೆ ಆಗುತ್ತಿದ್ದವರು. ತನ್ನ ಕುಟುಂಬ ಅಂತಂದ್ರೆ ಜೀವ ಬಿಡುವ ಮನುಷ್ಯ. ವರ್ಷಕ್ಕೆ ಎರಡು ಸಲವಾದರೂ ತಮ್ಮ ತರವಾಡು ಮನೆಗಳಲ್ಲಿ ಸೇರಿಕೊಂಡು ಎಲ್ಲರೂ ಜೊತೆಯಾಗಿ ಹಬ್ಬಗಳನ್ನು ಆಚರಿಸುವಂತೆ ಮಾಡುವುದು ಇವರ ಕೆಲಸ. ಕಾಲ ಬದಲಾಗುತ್ತಾ ಹೋಯಿತು. ಸಂಬಂಧಕ್ಕಿಂತ ಕೆಲಸಕ್ಕೆ ಮೌಲ್ಯ ಹೆಚ್ಚಾಯಿತು ಹಾಗಾಗಿ ಮನೆಯಲ್ಲಿದ್ದವರು ದುಡಿಮೆಯ ಕಾರಣಕ್ಕೆ ಬರೋದನ್ನೆ ಬಿಟ್ಟರು.

ದೂರದ ಕೆಲಸದಲ್ಲಿದ್ದವರು ವರ್ಷಕ್ಕೊಂದೆರಡು ದಿನ ಬರುವುದಕ್ಕೂ ಹಿಂದೆ ಮುಂದೆ ನೋಡುವ ಸಮಯ ಬಂದಿತ್ತು. ಹಿರಿಜೀವ ಕೇಳಿಕೊಂಡರು, ಬೇಡಿಕೊಂಡರು, ಯಾರು ತರವಾಡು ಮನೆಗೆ ಬರುವುದಕ್ಕೆ ತಯಾರಿಲ್ಲ. 

ಬಂದ್ರು ಕೂಡ ಅರ್ಧಕ್ಕರ್ಧ ಜನ ತಮ್ಮ ತಮ್ಮ ಕೆಲಸಗಳಲ್ಲಿ ಬೇರೆ ಬೇರೆ ಊರುಗಳಲ್ಲಿ ನೆಲೆ ನಿಂತಿದ್ದರು. ಇವರಿಗೊಂದು ಆಸೆ ನನ್ನ ಕುಟುಂಬ ಹೀಗಿದೆ ಇದನ್ನು ಇಷ್ಟು ವರ್ಷ ಮುಂದುವರೆಸಿಕೊಂಡು ಬಂದಿದ್ದೇನೆ ಇದನ್ನು ಬದುಕಿಸುವ ಜವಾಬ್ದಾರಿ  ಬೆಳಗಿಸುವ ಜವಾಬ್ದಾರಿ ನಿನ್ನದು ದೈವವೇ, ಎಂದು ಕೈಮುಗಿದು ನೆಮ್ಮದಿಯ ಉಸಿರನ್ನು ಬಿಡಬೇಕಿತ್ತು, ಆದರೆ ಯಾರಿಗೂ ಸಮಯವಿಲ್ಲ.

ಒಂದು ದಿನ ದೇವಸ್ಥಾನದ ಕೋಣೆಯೊಳಗೆ ತಮ್ಮ ಉಸಿರನ್ನು ನಿಲ್ಲಿಸಿದರು. ಮನೆ ಹಿರಿ ಜೀವವನ್ನ ನೋಡಿ ಹೋಗೋದಕ್ಕೆ ಎಲ್ಲಾ ಕುಟುಂಬಸ್ಥರು ಜೊತೆಯಾದರು, ಬದುಕಿದ್ದಾಗ ಬೇಡಿಕೊಂಡರು, ಬಾರದವರು ಮರಣ ಹೊಂದಿದ ಮೇಲೆ ಬೇಡವೆಂದರೂ ಮನೆಯೊಳಗೆ ಕಾಲಿಟ್ಟರು. ಅವರ ಅನುದಿನದ ಬೇಡಿಕೆಗೆ ದೇವರು ತಥಾಸ್ತು ಅಂದಿದ್ದರು ಆದರೆ ಅಮೂಲ್ಯ ರತ್ನವನ್ನು  ಪಡೆದುಕೊಂಡಿದ್ದರು..

-ಧೀರಜ್ ಬೆಳ್ಳಾರೆ

ಚಿತ್ರ ಕೃಪೆ: ಇಂಟರ್ನೆಟ್ ತಾಣ