ಸ್ಟೇಟಸ್ ಕತೆಗಳು (ಭಾಗ ೩೧೨) - ಬಾಗಿಲು
ಅಬ್ಬಾ ನನ್ನ ರೂಮನ್ನು ನೋಡೋಕೆ ಆಗ್ತಿಲ್ಲ. ಎಲ್ಲಾ ಬಟ್ಟೆಗಳು ಅಲ್ಲಲ್ಲಿ ಚೆಲ್ಲಾಪಿಲ್ಲಿಯಾಗಿ ಬಿದ್ದಿದೆ, ಪುಸ್ತಕಗಳೆಲ್ಲ ಟೇಬಲ್ ಮೇಲೆ ಹರಡಿಕೊಂಡಿದೆ. ಸರಿಯಾಗಿ ವಸ್ತಗಳನ್ನ ಜೋಡಿಸಿಲ್ಲ. ಒಣಗಲು ಹಾಕಿದ ಬಟ್ಟೆಯನ್ನೂ ತೆಗೆದಿಲ್ಲ. ಕಸಕಡ್ಡಿಗಳು ಜಾಗ ಹುಡುಕಿಕೊಂಡು ನನ್ನ ಕೋಣೆಗೆ ಬಂದು ನೆಲೆಯಾಗಿದೆ ,
ಜೇಡ ಯಾರು ಜಾಗ ಕೊಡುವುದಿಲ್ಲ ಅಂತ ಹೇಳಿ ನನ್ನ ಅನುಮತಿಯನ್ನು ಪಡೆಯದೆ ನನ್ನ ಮನೆಯಲ್ಲಿ ಅದರ ಮನೆಯನ್ನು ಕಟ್ಟಲು ಆರಂಭಿಸಿದೆ. ಇದು ನನ್ನ ರೂಮಿನ ಪರಿಸ್ಥಿತಿ ಹಾಗಾಗಿ ನನ್ನ ರೂಮನ್ನು ನೋಡೋಕೆ ಆಗ್ತಿಲ್ಲ .ಈಗ ನಾನು ಇವೆಲ್ಲವನ್ನು ಸ್ವಚ್ಛತೆ ಮಾಡ್ಕೋಬೇಕು ಅನ್ನೋದಾದರೆ ಹಲವು ಗಂಟೆಗಳ ಕೆಲಸವಿದೆ. ಅಷ್ಟು ಸಮಯ ನನ್ನಲ್ಲಿಲ್ಲ. ಬಾಗಿಲು ತೆರೆದಿಟ್ಟರೆ ಒಳಗಿನ ಕೊಳಕು ಕಂಡೇ ಕಾಣುತ್ತದೆ, ನೋಡಿದವರು ನನ್ನ ಬಗ್ಗೆ ಕೆಟ್ಟದಾಗಿ ಆಲೋಚನೆಯನ್ನು ಮಾಡುತ್ತಾರೆ ಹಾಗಾಗಿ ನನಗೆ ಸಿಕ್ಕಿದೆ ಕೊನೆಯ ಪರಿಹಾರ ಬಾಗಿಲು ಮುಚ್ಚಿಕೊಳ್ಳುವುದು ಬಾಗಿಲು ಮುಚ್ಚಿಕೊಂಡು ಒಳಗೆ ಬದುಕೋದು. ಎಷ್ಟು ಸಮಯ ಹಾಗೆ. ಹೊರಗಡೆಗೆ ಬಾಗಿಲಿಗೆ ಹೊಸತೊಂದು ಬೀಗವನ್ನು ತರಿಸಿ ಬೀಗವನ್ನು ಹಾಕಿದೆ. ಈಗ ಹೊರಗಡೆಯಿಂದ ನಿಂತು ನೋಡುವುದಾದರೆ ನನ್ನಷ್ಟು ಅದ್ಭುತವಾದ ಸೌಂದರ್ಯಮಯವಾದ ಕಣ್ಣನ್ನ ಒಪ್ಪುವಂತಹ ಮನೆ ನಿಮಗೆ ಇನ್ನೊಂದು ಸಿಗಲಿಕ್ಕೆ ಸಾಧ್ಯವಿಲ್ಲ ಹಾಗಾಗಿ ಯಾರೋ ನನ್ನ ಕೊಠಡಿಯನ್ನು ನೋಡುವುದಾದರೆ ಹೊರಗಿನಿಂದಲೇ ನೋಡಿ ಒಪ್ಪಿಗೆ ಸೂಚಿಸಿ ಮುಂದುವರಿಯಬೇಕು .ಇದು ನಾನು ಪಾಲಿಸಿಕೊಂಡು ಬಂದಿರುವ ಸಂಪ್ರದಾಯ. ಹಾಗಿದ್ರೆ ಒಳ್ಳೇದಲ್ವಾ ಒಳಗಿನ ಸ್ವಚ್ಛತೆಯನ್ನು ಎಷ್ಟು ಯಾವ ಸಮಯದಲ್ಲಿ ಎಂತ ಮಾಡೋದು ಹೊರಗಡೆಯಿಂದ ಚಂದ ಕಂಡರೆ ಸಾಕು. ಈಗ ಪ್ರಸ್ತುತ ಸಂದರ್ಭದಲ್ಲಿ ಬದುಕುತ್ತಿರುವ ಪ್ರತಿಯೊಬ್ಬರೂ ಮಾಡೋದೇ. ಹಾಗಾಗಿ ಮನೆಗೆ ಬೀಗ ಹಾಕಿದ್ದೇನೆ ಬಣ್ಣವನ್ನು ಹೊಡೆಸಿದ್ದೇನೆ. ಮನೆಯೊಳಗಿನ ಕಲ್ಮಶಗಳ ಅರಿವು ನೋಡುಗನಿಗೆ ಸಿಗದಂತೆ ಮಾಡಿದ್ದೇನೆ. ಮನುಷ್ಯನಿಗೆ ಮುಖವಾಡವಾದರೆ ಬಾಗಿಲಿಗೆ ಬೀಗ...!
-ಧೀರಜ್ ಬೆಳ್ಳಾರೆ
ಚಿತ್ರ ಕೃಪೆ: ಇಂಟರ್ನೆಟ್ ತಾಣ