ಸ್ಟೇಟಸ್ ಕತೆಗಳು (ಭಾಗ ೩೧೩) - ಸಾವು

ಸ್ಟೇಟಸ್ ಕತೆಗಳು (ಭಾಗ ೩೧೩) - ಸಾವು

ಅವಳಿಗೆ ಸಿಟ್ಟು ಮೂಗಿನ ತುದಿಯಲ್ಲಿ ಯಾವುದೇ ವಿಚಾರಕ್ಕಾದರೂ ಕೋಪಗೊಂಡು ಅದಕ್ಕೆ ಪ್ರತಿಕ್ರಿಯೆ ನೀಡಿ ಹೊರಟುಬಿಡುವ ಜಾಯಮಾನದವಳು. ಅವತ್ತು ಕಾಲೇಜಿನಲ್ಲಿ ಸಂಜೆ ಹೊತ್ತು ತನ್ನ ಆತ್ಮೀಯ ಗೆಳತಿಯರ ಜೊತೆ ಯಾವುದೋ ಸಣ್ಣ ವಿಚಾರಕ್ಕೆ ಜಗಳ ಆರಂಭಿಸಿದ್ದು ಹೇಗೂ ಮೊಬೈಲ್ ಇದ್ದ ಕಾರಣ ಕಾಲೇಜಿನ ಜಗಳ ಮೊಬೈಲ್ ಒಳಗೆ ಮುಂದುವರೆದಿತ್ತು. ಮಾತುಕತೆ ಮುರಿಯುವ ಹಂತಕ್ಕೆ ಹೋಗಿತ್ತು. "ನಿಮ್ಮ ಜೊತೆ ಜೀವನದಲ್ಲಿ ಮಾತಾಡುವುದಿಲ್ಲ" ಅನ್ನೋ ಮಟ್ಟಕ್ಕೆ. ಗೆಳೆಯರು ಇದೇ ಮಾತನ್ನು ಅವಳಿಂದ ಹಲವು ಸಲ ಕೇಳಿದ್ದರು, ಹಾಗಾಗಿ ನಾಳೆ ಮತ್ತೆ ಮಾತಾಡುತ್ತಾಳೆ ಅನ್ನೋ ನಿರೀಕ್ಷೆಯಲ್ಲಿದ್ದರು. ಮನೆಯಲ್ಲಿ "ಅಪ್ಪ ನಾನು ಪ್ರವಾಸಕ್ಕೆ ಹೋಗ್ತೇನೆ, ಸ್ವಲ್ಪ ದುಡ್ಡು ಬೇಕಿತ್ತು" ಅಂತ ಕೇಳಿದಕ್ಕೆ "ನಿನಗೆ ಮನೇಲಿ ಮಾಡೋಕೆ ಬೇರೆ ಕೆಲಸ ಇಲ್ವಾ, ಮುಂದೊಂದುಸಲ ಯಾವಾಗಲೂ ನೋಡುವ ಈಗಬೇಡ "ಇದರಿಂದ ಅವಳ ಮನಸ್ಸಿನ ನೋವು ಇನ್ನೂ ಹೆಚ್ಚಾಯಿತು. ಹಾಗೆಯೇ ರಾತ್ರಿ ಚಾಪೆ ಮತ್ತು ದಿಂಬಿನ ಜೊತೆ ಮಾತನಾಡುತ್ತಾ ಮಲಗಿದಳು. ಮುಂಜಾನೆಯೆದ್ದು ನದಿಗೆ ನೀರು ತರೋಕೆ ಹೊರಟಿದ್ದಳು. ಈ ತಿಂಗಳಲ್ಲಿ ಸುರಿದ ಮಳೆಯ ಪ್ರಭಾವಕ್ಕೂ ಅಥವಾ ಕಲ್ಲಿನ ಮೇಲಿನ ಹಾವಸೆಗೆ, ಆದನ್ನು  ಇವಳು ಗುರುತಿಸದೇ ಇರುವುದಕ್ಕೋ ಗೊತ್ತಿಲ್ಲ. ಒಟ್ಟಿನಲ್ಲಿ ನೀರಿಗೆ ಬಿದ್ದು  ಪ್ರಾಣವನ್ನು ಕಳೆದುಕೊಂಡಳು.

ಗೆಳೆಯರ ಮಾತೇನೆಂದರೆ "ನಾವು ಅವಳ ಜೊತೆ ಜಗಳ ಆಡಬಾರದಿತ್ತು ನಮ್ಮಿಂದಾಗಿ ಅವಳು ಆತ್ಮಹತ್ಯೆ ಮಾಡಿಕೊಂಡಳು" ಇತ್ತಕಡೆ ತಂದೆಯ ಮಾತು "ಕೇವಲ ಪ್ರವಾಸಕ್ಕೆ ಬೇಡ ಅಂದದಕ್ಕೆ ಆತ್ಮಹತ್ಯೆ ಮಟ್ಟಕ್ಕೆ ಹೋಗುವ ನಿರ್ಧಾರ, ನನ್ನ ಮಗಳು, ಯಾಕೆ ಈ ನಿರ್ಧಾರ ತೆಗೆದುಕೊಂಡಳು, ಛೆ ನಾನು ಪ್ರವಾಸಕ್ಕೆ ದುಡ್ಡು ಕೊಡಬೇಕಿತ್ತು" 

ಇಲ್ಲಿ ಎರಡೂ ದಿಕ್ಕುಗಳು ಬೇರೆ ಬೇರೆ ಆಲೋಚನೆಗಳನ್ನು ಆ ಸಾವಿಗೆ ಸಮೀಕರಿಸಿಕೊಂಡವು, ಆದರೆ ನಿಜ ವಿಚಾರವನ್ನು ತಿಳಿಸುವವರು ಮರಣ ಹೊಂದಿದ ಮೇಲೆ ಸುಳ್ಳು  ಪ್ರಚಲಿತದಲ್ಲಿರುತ್ತದೆ. ಸತ್ಯ ಸಾಬೀತಾಗುವವರೆಗೆ  ಸುಳ್ಳು ವಿಜೃಂಭಿಸುತ್ತದೆ …

-ಧೀರಜ್ ಬೆಳ್ಳಾರೆ

ಚಿತ್ರ ಕೃಪೆ: ಇಂಟರ್ನೆಟ್ ತಾಣ