ಸ್ಟೇಟಸ್ ಕತೆಗಳು (ಭಾಗ ೩೧೪) - ಅನಿರೀಕ್ಷಿತ

ದೈವಕ್ಕೆ ಹರಕೆ ಸಲ್ಲಿಸಿದ್ದಾನೆ ಕೋಲವೊಂದನ್ನು ನೀಡುವುದಾಗಿ ಮಾತು ಕೊಟ್ಟಿದ್ದಾನೆ. ಮಗಳು ಮೂರು ವರ್ಷದ ನಂತರ ಗರ್ಭಿಣಿಯಾಗಿದ್ದಾಳೆ. ಮನೆಯಲ್ಲೊಂದು ಸಂಭ್ರಮ. ಒಬ್ಬಳೇ ಮಗಳು ಮೊಮ್ಮಗುವನ್ನು ಇನ್ನು ಏಳು ತಿಂಗಳಲ್ಲಿ ನೀಡಲಿದ್ದಾಳೆ. ಹಾಗಾಗಿ ಗಂಡನ ಮನೆಯಲ್ಲಿ ಇರುವವಳನ್ನ ತನ್ನ ಮನೆಗೆ ತಂದೆ ಕರೆಸಿಕೊಂಡ. ಕೆಲಸದ ನಿಮಿತ್ತ ಹೆಂಡತಿಯನ್ನು ಬಸ್ಸನ್ನೇರಿಸಿ ತಾನೂ ಮರುದಿನ ಬರುವುದಾಗಿ ಗಂಡ ತಿಳಿಸಿದ್ದಾನೆ. ತಾನು ಬಾಲ್ಯದಲ್ಲಿ ಕಳೆದ ದಿನಗಳನ್ನು, ತಂದೆ-ತಾಯಿಗಳ ಪ್ರೀತಿಯ ಮುಖವನ್ನು ನೆನೆಯುತ್ತಾ ಬಸ್ಸಿನಲ್ಲಿ ಪಯಣಿಸುತ್ತಿದ್ದಾಳೆ ಆಕೆ. ಊರು ತಲುಪಿದಾಗ ಸೂರ್ಯನು ಹುಟ್ಟೋದಕ್ಕೆ ಇನ್ನೊಂದು ಕೆಲವು ಗಂಟೆಗಳಷ್ಟೇ ಉಳಿದುಬಿಟ್ಟಿದೆ. ಆಕೆಯ ತಂದೆ ಮಗಳ ಬರುವಿಕೆಗಾಗಿ ಮೊದಲೇ ಕಾದು ಕುಳಿತಿದ್ದರು. ಮಗಳನ್ನು ಮನೆಗೆ ಕರೆದೊಯ್ಯುವ ಸಂಭ್ರಮ ತಂದೆಗೆ. ಬೈಕ್ ಸ್ಟಾರ್ಟ್ ಮಾಡಿ ಎಕ್ಸ್ಲೇಟರ್ ತಿರುಗಿಸಿ ಗೇರ್ ಬದಲಿಸಿ ಒಂದು ಚೂರು ಮುಂದೆ ಚಲಿಸಿದರು. ಅಲ್ಲಿ ಬ್ಯಾರಿಕೇಡ್ ಅಳವಡಿಸಲಾಗಿದೆ. ವಿರುದ್ಧ ದಿಕ್ಕಿನಿಂದ ಬರುವ ಗಾಡಿ ಅಲ್ಲೊಂದು ಕಡೆ ವೇಗವನ್ನು ಕಡಿಮೆಗೊಳಿಸಿ ಮುಂದೆ ಸಾಗಬೇಕು ಹಾಗಾಗಿ ದೂರದಲ್ಲಿ ಬರುತ್ತಿದ್ದ ಬಸ್ಸು ವೇಗ ಕಡಿಮೆಗೊಳಿಸುತ್ತದೆ ಎನ್ನುವ ನಂಬಿಕೆಯಿಂದ ರಸ್ತೆಯನ್ನು ದಾಟುವುದಕ್ಕೆ ಬೈಕಲ್ಲಿ ಮುಂದುವರೆದರು. ಕ್ಷಣದಲ್ಲಿ ನಡೆದಿದ್ದು ಅವಗಡ. ದೇಹವೆರಡು ಗಾಳಿಯಲ್ಲಿ ಹಾರಿ ನೆಲಕ್ಕಪ್ಪಳಿಸಿ ಕಣ್ಣು ತೆರೆಯುವಷ್ಟರಲ್ಲಿ ಉಸಿರು ನಿಂತು ಹೋಗಿತ್ತು. ರಕ್ತ ತನ್ನ ಚಲನೆಯನ್ನು ಆರಂಭಿಸಿತ್ತು. ದೈವ ಕೋಲಕ್ಕೆ ಕಾಯುತ್ತಿದೆ. ಮಗಳು, ಮೊಮ್ಮಗು, ಗಂಡನನ್ನು ಕಳೆದುಕೊಂಡ ತಾಯಿ ಕಣ್ಣೀರಿಡುತ್ತಿದ್ದಾಳೆ. ಮರುದಿನ ಬರಬೇಕಾದ ಗಂಡ ಅದೇ ದಿನ ಹೊರಟು ಬರಬೇಕಾದ ಅನಿವಾರ್ಯ ಪರಿಸ್ಥಿತಿ ನಿರ್ಮಾಣವಾಯಿತು. ಎಲ್ಲರೂ ಕಳೆದುಕೊಂಡರು. ಘಟನೆಗಳು ಘಟಿಸುತ್ತವೆ ಭಾವಗಳು ಬೆಸೆದುಕೊಳ್ಳುತ್ತವೆ.
-ಧೀರಜ್ ಬೆಳ್ಳಾರೆ
ಚಿತ್ರ ಕೃಪೆ: ಇಂಟರ್ನೆಟ್ ತಾಣ