ಸ್ಟೇಟಸ್ ಕತೆಗಳು (ಭಾಗ ೩೧೬) - ಮಾತಲ್ಲದ ಮಾತು

ಹಸಿವು ನಡೆಸುತ್ತದೆ. ದೂರದ ಅರಿವಿಲ್ಲದೆ ಸಾಗಬೇಕಾಗುತ್ತದೆ. ದಿನವೂ ಅರೆ ಹೊಟ್ಟೆಯಲ್ಲಿ ಮಲಗುವ ಆ ಮನೆಯವರೆಲ್ಲಾ ಎಲ್ಲಾದರೂ ಜಾತ್ರೆ, ಕೋಲ, ಉರೂಸ್ ಸಿಕ್ಕರೆ ಸಾಕು ಮನೆಗೆ ಬೀಗ ಹಾಕಿ ಹೊರಡುತ್ತಾರೆ. ತಲುಪಬೇಕಾದ ಜಾಗ ಗೊತ್ತಿದೆ ಹೊರತು ಸಾಗುವ ದಾರಿ ಗೊತ್ತಿಲ್ಲ. ಗುರುತಿಲ್ಲದವರ ಬಳಿ ಕೇಳುತ್ತಾ ಸಾಗುತ್ತಾರೆ. ಜಾಗ ತಲುಪಿದ ತಕ್ಷಣ ಊಟದ ದಾರಿ ಹುಡುಕುತ್ತಾರೆ. ಮುಂದೆಲ್ಲೂ ಸಿಗುವುದಿಲ್ಲ ಅನ್ನೋ ಭಾವನೆಯಲ್ಲಿಯೇ ಒಂದಗುಳು ವ್ಯರ್ಥವಾಗದೆ ಹೊಟ್ಟೆಗಿಳಿಸುತ್ತಾರೆ. ಇನ್ನೂ ಹೆಚ್ಚಿನದನ್ನ ನೀಡಿದರೆ ಮನೆಗೊಯ್ಯುತ್ತಾರೆ. ಅನ್ನ ತಿನ್ನುವಾಗ ಹೊಟ್ಟೆಯೊಳಗಿನ ಹಸಿವು ಸಾಯುವ ಕಾರಣ ಕಣ್ಣೀರು ನಿಧಾನವಾಗಿ ಕಣ್ಣಕೊಳದಲ್ಲಿ ತುಂಬಿ ಕೆಲವೊಮ್ಮೆ ಕಟ್ಟೆಯೂ ಒಡೆದು ತಟ್ಟೆಗೆ ಹಸಿವು ಸಾಯಿಸಿದವನ ಹುಡುಕುತ್ತಾ ಹರಿದು ಬಿಡುತ್ತದೆ. ಪ್ರತೀ ಹೆಜ್ಜೆಯಲ್ಲೂ ಹಸಿವು ಮಾತನಾಡಿಸುತ್ತದೆ. ಆದರೆ ನಮಗೆ ಕೇಳೋದು ನಮ್ಮ ಹೊಟ್ಟೆಯೊಳಗಿನ ನೋವಿನ ಕೂಗು ಹೊರತು, ಮೌನವಾಗಿರುವ ನೋವಿನ ಮುಲುಗಾಟವಲ್ಲ...
ಅದರೆ ಹೆಜ್ಜೆಗಟ್ಟಿಯಾಗಲು, ಬದುಕಿಗೊಂದು ಸ್ಪೂರ್ತಿ ಸಿಕ್ಕಲು ಹಸಿವು ಜೊತೆಯಾಗಿರಲೇಬೇಕು. ಹಾಗಾಗಿ ಹಸಿವನ್ನು ಗೆಳೆಯನಾಗಿಸಿಕೋ...ಕೈ ಬಿಡಬೇಡ. ಹಸಿವು ತೊರೆದರೇ ಬದುಕು ಮುಗಿದಂತೆ.
-ಧೀರಜ್ ಬೆಳ್ಳಾರೆ
ಚಿತ್ರ ಕೃಪೆ: ಇಂಟರ್ನೆಟ್ ತಾಣ