ಸ್ಟೇಟಸ್ ಕತೆಗಳು (ಭಾಗ ೩೧೮) - ಮಾತು

ಸ್ಟೇಟಸ್ ಕತೆಗಳು (ಭಾಗ ೩೧೮) - ಮಾತು

ಮನುಷ್ಯರಿಲ್ಲದ ಊರನ್ನು ನೀವೊಮ್ಮೆ ನೋಡಬೇಕು. ಅಲ್ಲಿ ನಾವು ಇಷ್ಟರವರೆಗೆ ಕೇಳಿರದ ಮಾತುಕತೆಗಳು ನಡೆಯುತ್ತವೆ ಜೋರು ಮಳೆ ಬಂದಾಗ ಮೊದಲ ಹನಿಯಿಂದ ಹಿಡಿದು ಕೊನೆಯ ಹನಿಯವರೆಗೂ ಪ್ರತಿ ಒಂದು ಗಿಡದ ಎಲೆಗಳು, ಹುಲ್ಲು ಗರಿಕೆಗಳು ಮಳೆ ಹನಿಯೊಂದಿಗೆ ಮಾತನಾಡುತ್ತವೆ. ಬಾಯಾರಿ ಬೆಂದು ಬಸವಳಿದಿರುವ ಸಂದರ್ಭದಲ್ಲಿ ನೀರುಣಿಸಿದಕ್ಕೆ ಧನ್ಯವಾದಗಳನ್ನ ಜೊತೆಗೆ ಕುಶಲೋಪರಿ ವಿಚಾರಿಸುತ್ತದೆ. ಸಮುದ್ರದ ತಟದಲ್ಲಿ ಮರಳಿನೊಂದಿಗೆ ಅಲೆಗಳು ಸಂಭಾಷಣೆ ನಡೆಸುತ್ತಲೇ ಇರುತ್ತವೆ .ಆದರೆ ನಮ್ಮ ಹೆಜ್ಜೆಗಳ ನಡುವೆ ಅವುಗಳ ಮಾತುಕತೆಗೆ ಒಂದಿಷ್ಟು ತೊಂದರೆಯಾಗಿದೆ. ಈಗ ನಾವಿಲ್ಲವಲ್ಲ ಪ್ರೀತಿ ಸ್ನೇಹ ಕೌತುಕ ಬಾಂಧವ್ಯ ಎಲ್ಲದರ ಮಾತುಕತೆಗಳು ಪ್ರತಿಯೊಂದು ಮರಳಿನ ಜೊತೆಗೆ ಪ್ರತಿ ಹನಿಯೂ ಪಿಸುಗುಟ್ಟುತ್ತದೆ. ಸೂರ್ಯನ ಕಿರಣ ಸಕಲ ಜೀವಿಗಳೊಂದಿಗೆ, ನೆಲವು ಬೇರಿನೊಂದಿಗೆ ಹೀಗೆ ಪ್ರತಿಯೊಂದು ಕೂಡ ಮಾತನಾಡುತ್ತವೆ. ಇದು ಮನುಷ್ಯರಿಲ್ಲದ ಊರು. ನಾವು ಇವುಗಳ ನಡುವೆ ಹೋಗಿ ಅವುಗಳ ಮಾತನ್ನು ಮುರಿದು ನಮ್ಮ ಮಾತನ್ನ ಪ್ರತಿಷ್ಠಾಪಿಸುತ್ತೇವೆ ಹಾಗಾಗಿ ಅವುಗಳು ಮಾತು ಕಳೆದುಕೊಂಡು ಮೂಕರಾಗಿರುವುದಕ್ಕೆ ನಾವೊಂದಷ್ಟು ಸಮಸ್ಯೆಗಳನ್ನು ಅನುಭವಿಸುತ್ತಿದ್ದೇವೆ. ಇದಕ್ಕೆ ಮಾಡಬೇಕಾಗಿರುವುದಿಷ್ಟೇ ಕಾಲಾವಕಾಶವನ್ನು ಸ್ಥಳಾವಕಾಶವನ್ನು ನೀಡಬೇಕು, ಹಾಗಾದಾಗ ನಾವು ಬದುಕೋಕೆ ಅರ್ಹರಾಗುತ್ತೇವೆ..

-ಧೀರಜ್ ಬೆಳ್ಳಾರೆ

ಚಿತ್ರ ಕೃಪೆ: ಇಂಟರ್ನೆಟ್ ತಾಣ