ಸ್ಟೇಟಸ್ ಕತೆಗಳು (ಭಾಗ ೩೧೯) - ಯೋಚನೆ

ಸ್ಟೇಟಸ್ ಕತೆಗಳು (ಭಾಗ ೩೧೯) - ಯೋಚನೆ

ಸಂತೆ ಪೇಟೆಯಲ್ಲಿ ಏನಾದ್ರೂ ಖರೀದಿಸಬೇಕು ಅಂತ ನಿಂತಿದ್ದ ಅವನು. ಅವನ ಹೆಂಡತಿ ಬಂದು ವಸ್ತುಗಳನ್ನು ಖರೀದಿಸಿಕೊಂಡು ಮನೆಗೆ ಹೋಗ್ತಾ ಇದ್ದವಳು, ಇತ್ತೀಚೆಗೆ ನಡೆದ ಒಂದು ಅವಘಡದಿಂದ ಅವಳನ್ನು ಕಳೆದುಕೊಂಡುಬಿಟ್ಟಿದ್ದ. ಏಕಾಂಗಿಯಾಗಿ ಬದುಕು ಸಾಗಿಸುತ್ತಿದ್ದ ಅವಳ ನೆನಪಿನ ಜೊತೆ. ಹೀಗಿರುವಾಗ ಆ ದಿನ ಸಂತೆಯ ಕೊನೆಯಲ್ಲಿ ಕಂಡವಳೇ ಹೊಸ ಹುಡುಗಿ. ನೋಡೋಕೆ ತನ್ನ ಹೆಂಡತಿಯ ರೂಪವೇ ಅದ್ದರಿಂದ ಅವಳನ್ನೇ ದಿಟ್ಟಿಸಿ ನೋಡುತ್ತಿದ್ದ. ಮನಸ್ಸು ಬೇಡ ಅಂದರು ದೃಷ್ಟಿ ಬದಲಿಸಿರಲಿಲ್ಲ. ಮರುದಿನ ಕೆಲಸಕ್ಕೆ ಹೋಗುವಾಗ ತಾನು ಹೋಗುತ್ತಿದ್ದ ಬಸ್ಸಿನಲ್ಲಿ ಅವಳು ಪಯಣಿಸುತ್ತಿದ್ದಳು. ಇಬ್ಬರಿಗೂ ಒಂದೇ ಸೀಟು ಸಿಕ್ಕಿತ್ತು. ಇವನಿಳಿಯುವ ಜಾಗದಲ್ಲೇ ಆಕೆಯೂ ಇಳಿದಳು. ಇವನು ಕೆಲಸ ಮಾಡುವ ಆಫೀಸಿನ ಪಕ್ಕದ ಜೆರಾಕ್ಸ್ ಅಂಗಡಿಯಲ್ಲಿ ಆಕೆ ಕೆಲಸ ಅನ್ನೋದು ಇವನಿಗೆ ಸಂಜೆಗೆ ಅರಿವಾಯಿತು. ಅಂದಿನ ಪಯಣವೂ ಮೌನವಾಗಿತ್ತು. ಆ ದಿನ ಹೆಂಡತಿಯ ಮುಖದೊಂದಿಗೆ ಅವಳ ಮುಖವೂ ಆಗಾಗ ಮೂಡಿ ಮರೆಯಾಗುತ್ತಿತ್ತು. ಮರುದಿನ ಅವಳೊಂದಿಗೆ ಮಾತನಾಡಲೇಬೇಕು ಅನ್ನುವ ನಿರ್ಧಾರ ಮಾಡಿ ಬಸ್ ಸ್ಟ್ಯಾಂಡ್ ನಲ್ಲಿ ಯಾರೂ ಇಲ್ಲದಿರುವ ಸಮಯ ನೋಡಿ ಅವಳೊಂದಿಗೆ ಮಾತಿಗಿಳಿದ, " ಸುತ್ತು ಬಳಸಿ ಮಾತನಾಡುವ ಅಭ್ಯಾಸವಿಲ್ಲ, ನೇರವಾಗಿ ವಿಚಾರಕ್ಕೆ ಬರುತ್ತೇನೆ. ನನಗೆ ನಿಮ್ಮನ್ನು ನೋಡಿ ಇಷ್ಟವೋ, ಪ್ರೇಮವೋ, ಸ್ನೇಹವೋ ಗೊತ್ತಿಲ್ಲ ಆದರೆ ನೀವು ನನ್ನ ಜೊತೆಯಾಗಿರಬೇಕು ಅಂತನಿಸಿದೆ". ಆಕೆಯ ಉತ್ತರಕ್ಕಾಗಿ ಕಾದ " ನನಗೂ ನಿಮ್ಮನ್ನು ಕಂಡರೆ ಇಷ್ಟ" ಅಂದುಬಿಟ್ಲು. ಇವನಿಗೆ ಸ್ವರ್ಗಕ್ಕೆ ಮೂರೇ ಗೇಣು. "ಆದರೂ ನಿಮ್ಮಲ್ಲಿ ಒಂದು ವಿಚಾರ ಮುಚ್ಚಿಟ್ಟಿದ್ದೆ ನನಗೆ ಮೂರು ವರ್ಷದ ಹಿಂದೆ ಮದುವೆಯಾಗಿದೆ ನನ್ನ ಹೆಂಡತಿ ಇತ್ತೀಚೆಗೆ ನನ್ನನ್ನು ಬಿಟ್ಟು ದೇವರ ಪಾದ ಸೇರಿದ್ದಾಳೆ, ಹೀಗಿದ್ದರೂ ನಿಮಗೆ ಒಪ್ಪಿಗೆಯೇ" " ಅದರಲ್ಲೇನು ನನಗೂ ಮದುವೆಯಾಗಿ ಒಂದು ವರ್ಷವಾಯಿತು ಅಷ್ಟೇ ,ಒಂದು ಆಕ್ಸಿಡೆಂಟ್ ನಲ್ಲಿ ನಾನು ನನ್ನ ಗಂಡನನ್ನು ಕಳೆದುಕೊಂಡಿದ್ದೇನೆ ಹೀಗಿರುವಾಗ ನಾವು ಒಬ್ಬರಿಗೊಬ್ಬರು ಆಸರೆಯಾಗಿರೋದರಲ್ಲಿ ತಪ್ಪೇನಿದೆ" ಆತ ಯೋಚಿಸಲಾರಂಭಿಸಿದ. ಈಗ ಅವಳ ಒಳಗೆ ಪ್ರೀತಿಯ ಭಾವ ಉಳಿದಿರಬಹುದೇ, ಮತ್ತೆ ಮತ್ತೆ ಅವಳ ಗಂಡನ ಯೋಚನೆ ಅವಳಲ್ಲಿ ಮೂಡಿದರೆ, ಅವಳಿಂದ ನನಗೆ ಪ್ರೀತಿ ಸಿಗದೇ ಇದ್ದರೆ, "ಮೇಡಂ ನಿಮ್ಮ ಬದುಕಲ್ಲೂ ಕಹಿ ಘಟನೆಗಳಿದ್ದಾವೆ, ಅವುಗಳ ನೆನಪಿನಿಂದಲೇ ಹೊರಬರಬೇಕಾಗುತ್ತದೆ. ಹಾಗಿರುವಾಗ ಮತ್ತೆ ಜೊತೆಯಾಗಿ ಬದುಕುವುದು ಸರಿಯಲ್ಲ ಅನಿಸ್ತಿದೆ" ಬರುತ್ತೇನೆಂದು ಹೊರಟುಬಿಟ್ಟ. ಆಕೆ ಮೌನವಾಗಿದ್ದಳು. ತಾನಾಡಿದ್ದು ಸುಳ್ಳು ಎಂದು ಅವನಿಗೆ ಸಾರಿ ಹೇಳಬೇಕು ಅಂತ ಅವಳಿಗೆ ಅನ್ನಿಸಿದರೂ ಆತನ ಸಂಕುಚಿತ ಮನಸ್ಸಿನ ಮುಂದೆ ಅದು ಅಗತ್ಯವಿಲ್ಲ ಎಂದು ತುಟಿಯಂಚಲಿ ನಕ್ಕಳು.

-ಧೀರಜ್ ಬೆಳ್ಳಾರೆ

ಚಿತ್ರ ಕೃಪೆ: ಇಂಟರ್ನೆಟ್ ತಾಣ