ಸ್ಟೇಟಸ್ ಕತೆಗಳು (ಭಾಗ ೩೧) - ಚಪ್ಪಲಿ

ಸ್ಟೇಟಸ್ ಕತೆಗಳು (ಭಾಗ ೩೧) - ಚಪ್ಪಲಿ

ಒಂದು ವಾರ ಮನೆಯಿಂದ ಹೊರ ಬರುವ ಹಾಗಿರಲಿಲ್ಲ. ಕರ್ಫ್ಯೂ ಜಾರಿಗೊಳಿಸಿದ್ದರು. ಯಾವುದೋ ವಿಷಯಕ್ಕೆ ಜಾತಿಯ ಸಣ್ಣ ಕಿಡಿ ಜ್ವಾಲಾಮುಖಿಯಾಗಿ ಹೋಗಿತ್ತು. ಕಲ್ಲು, ಕೋಲು, ಕತ್ತಿಗಳು ಮಾತನಾಡುತ್ತಿದ್ದವು. ಪೊಲೀಸರು ಬಂದು ಲಾಠಿಚಾರ್ಜ್ ಮಾಡಿ ಗಾಳಿಯಲ್ಲಿ ಗುಂಡು ಹಾರಿಸಿದ ನಂತರ ಆಂಬುಲೆನ್ಸ್ ಶಬ್ದ ಕೇಳುತ್ತಿತ್ತು. ಎಲ್ಲವೂ ಯಥಾಸ್ಥಿತಿಗೆ ಬಂದಾಗ  ಊರು ಉಸಿರಾಡಿತು. ನಾನು ಘಟನೆ ನಡೆದ ಸ್ಥಳದ ಬಳಿ ತಲುಪಿದಾಗ ಅಲ್ಲಿ ಬಿದ್ದಿರುವ ಕೆಲವು ವಸ್ತುಗಳಲ್ಲಿ  ಚಪ್ಪಲಿ ಕಥೆಯೊಂದನ್ನು ಹೇಳಲಾರಂಭಿಸಿತು." ಅವತ್ತು ಅವನ ಮಗಳಿಗೆ  ಉಸಿರಾಟದ ಸಮಸ್ಯೆ ಆರಂಭವಾಗಿತ್ತು. ಮುದ್ದಿನ ಮಗಳ ಒದ್ದಾಟ ನೋಡಲಾಗದೆ ಮದ್ದಿಗಾಗಿ ಆಸ್ಪತ್ರೆ ಕಡೆ ಹೊರಟವನು ಇದೇ ದಾರಿಯನ್ನು ಆಶ್ರಯಿಸಬೇಕಾಗಿದ್ದು ಅನಿವಾರ್ಯ. ಬದಿಯಲ್ಲಿ ಸಾಗೋಣವೆಂದರೆ ಪೋಲಿಸರ ಗಾಡಿ ಅಲ್ಲಿಗೆ ಬಂದು ತಲುಪಿತ್ತು. ಅವನ ಕಥೆಯನ್ನು ವಿವರಿಸುವ ಅವಕಾಶವೇ ಸಿಗದೆ ಹೊಡೆತಗಳು ಬಿದ್ದವು. ಜನ ಖಾಲಿಯಾದರು. ಚಪ್ಪಲಿ ತುಂಡಾಗಿ ಅಲ್ಲೇ ಉಳಿಯಿತು. ರಕ್ತದ ಒಂದೆರಡು ಹನಿಗಳು ಅದರ ಮೇಲಿತ್ತು. ಶ್ರಮಜೀವಿಯ ಬದುಕು ಸವೆದದ್ದನ್ನು ಚಪ್ಪಲಿ ತೋರಿಸುತ್ತಿತ್ತು. ಅವನಿಗೆ ಮುಂದೇನಾಯಿತೋ ಗೊತ್ತಿಲ್ಲ. ಚಪ್ಪಲಿ ಒಂದು ಅಲ್ಲಿ ಉಳಿದಿತ್ತು.  

ಇನ್ನೊಂದು ಚಪ್ಪಲಿ ಸಿಕ್ಕಿದರೆ ಅದು ಮುಂದಿನ ಪರಿಸ್ಥಿತಿಯನ್ನು ವಿವರಿಸಬಹುದೇನೋ. ಬರೀ ಪಾದವು ಮನೆಯನ್ನು ಸೇರಿದೆಯೋ ಅಥವಾ ಉಸಿರು ನಿಂತಿದೆಯೋ ಇನ್ನೊಂದು ಚಪ್ಪಲಿ ತುಂಡಾಗಿದೆಯೋ ಗೊತ್ತಿಲ್ಲ. ಗಲಾಟೆಯ ತಣ್ಣಗೆ ಮಲಗಿತ್ತು. ಯಾವ ಮನೆ ಮೌನದಿಂದ ಅಳುತ್ತಿದೆಯೋ  ಗೊತ್ತಿಲ್ಲ... 

-ಧೀರಜ್ ಬೆಳ್ಳಾರೆ 

ಚಿತ್ರ: ಇಂಟರ್ನೆಟ್ ಕೃಪೆ