ಸ್ಟೇಟಸ್ ಕತೆಗಳು (ಭಾಗ ೩೨೦) - ತಿರುವು

ಅವನ ಮನೆಯ ಮುಂದಯೇ ಮರಳಿನ ಮೈದಾನ, ಕಣ್ಣು ಸಾಗುವವರೆಗೂ ಕಾಣುವ ಸಮುದ್ರ. ಬದುಕಿನಲ್ಲಿ ಕನಸುಗಳ ಸರಮಾಲೆಗಳನ್ನು ಹೊತ್ತು ಸಾಗುತ್ತಿದ್ದಾನೆ. ಆಗಲೇ ಎದೆಯೊಳಗೊಂದು ಸಣ್ಣ ಪ್ರೀತಿಯ ಚಿಗುರು ಬೇರನಿಳಿಸಿ ಮರವಾಗುವ ಸೂಚನೆ ನೀಡುತ್ತಿತ್ತು. ತನ್ನ ಪ್ರೀತಿಗೆ ಉಡುಗೊರೆ ನೀಡುವ ಆಸೆಯಾದರೂ ಸ್ಥಿತಿ ಅದಕ್ಕೆ ಒಪ್ಪಿಗೆ ನೀಡುತ್ತಿಲ್ಲ. ಅವಳ ಮುಖದಲ್ಲಿ ನಗುವಿನ ಸಿಂಚನ ಕಾಣಬೇಕೆಂಬ ಆಸೆಯಿಂದ ದಿನವೂ ಮರಳಿನ ಮೇಲೆ ಒಂದು ಪುಟ್ಟ ಮನೆಯ ಮಾಡಿ ಅಲ್ಲೊಂದು ಮರಳಿನ ಗೊಂಬೆಯನ್ನು ಮಾಡಿ ಹೇಗಿದೆ ಅಂತ ತನ್ನ ಪ್ರೀತಿಯಲ್ಲಿ ಕೇಳುತ್ತಿದ್ದ. ಆಕೆ ಅದನ್ನ ತುಳಿದು ಅಲ್ಲಿಂದ ಹೊರಟು ಬಿಡುತ್ತಿದ್ದಳು. ಅನುದಿನವೂ ಇನ್ನೊಂದು ಮನೆಯನ್ನ ಮಾಡಿ ಅವಳ ನಗುವಿಗೆ ಕಾಯುತ್ತಿದ್ದ. ಆಕೆ "ನೀನು ಪ್ರೀತಿಗಾಗಿ ಪ್ರತಿದಿನವು ಕನಸಿನ ಮನೆಯನ್ನು ಕಟ್ಟುತ್ತಿದ್ದೀಯ ಹೊರತು ಬದುಕಿದ ಮನೆಯನ್ನು ಕಟ್ಟುತ್ತಿದ್ದೀಯ ಎಂದು ನನಗನ್ನಿಸುತ್ತಿಲ್ಲ. ಎಂದು ಮನೆಯನ್ನು ತುಳಿದು ಹೊರಟೇ ಬಿಟ್ಟಳು ಮತ್ತೆಂದೂ ಮರಳಿ ಊರಿಗೆ ಮರಳದಂತೆ. ಕಾಲ ಮುಂದುವರೆಯಿತು. ಆತನ ಶ್ರಮಕ್ಕೋ, ಹೆತ್ತವರ ಆಶೀರ್ವಾದವೋ ಏನೋ ಸ್ಥಿತಿವಂತನಾದ. ಆತ ಊರಿನಲ್ಲಿರುವ ಬಡವರಿಗೆ ಮನೆ ಕಟ್ಟಿಸುವ ಮಟ್ಟಕ್ಕೆ ಬೆಳೆದು ನಿಂತ. ಆತನಿಗೆಂದೇ ಹೊಸತೊಂದು ಹೆಸರಾಯಿತು. ಈಗಲೂ ಆತ ಮನೆ ಕಟ್ಟಿಸುತ್ತಿದ್ದಾನೆ. ತುಳಿದು ಚಲಿಸುತ್ತಿದ್ದವಳು ಇಂದು ಬಾಡಿಗೆ ಮನೆಯೊಂದರಲ್ಲಿ ಜೀವನ ಸಾಗಿಸುತ್ತಿದ್ದಾಳೆ.
-ಧೀರಜ್ ಬೆಳ್ಳಾರೆ
ಚಿತ್ರ ಕೃಪೆ: ಇಂಟರ್ನೆಟ್ ತಾಣ