ಸ್ಟೇಟಸ್ ಕತೆಗಳು (ಭಾಗ ೩೨೨) - ಮಾತುಕತೆ

ಸ್ಟೇಟಸ್ ಕತೆಗಳು (ಭಾಗ ೩೨೨) - ಮಾತುಕತೆ

ಉಡುಪಿ ದ್ವಾರ ದಾಟಿ ಮುಂದುಗಡೆ ಬಲಕ್ಕೆ ತಿರುಗಿದಾಗ ಅಲ್ಲೊಂದು ಸಣ್ಣ ಮರ ಅದರ ನೆರಳು ಅದರ ಬುಡದಿ ಕುಳಿತ ಒಂದಿಬ್ಬರಿಗೆ ನೆರಳು ನೀಡಬಹುದೇನೋ. ಆ ನೆರಳಿನಲ್ಲಿ ತಲೆಗೊಂದು ಸೂರು ಕಟ್ಟಿಕೊಂಡು ಚಪ್ಪಲಿ ಅಂಗಡಿ ಇಟ್ಟಿದ್ದಾರೆ  ಒಬ್ಬರು ಅಜ್ಜ. ಅವರು ಅಲ್ಲಿ ಬಂದವರಲ್ಲಿ ಮಾತನಾಡುತ್ತಾರೆ. ಅವರ ಮಾತುಗಳು ಎಲ್ಲವೂ ಕಾಲದ ಸುತ್ತಲೇ ಸುತ್ತುತ್ತಿರುತ್ತವೆ. ಕಾಲಿಗೆ ಧರಿಸುವ ಹರಿದ ಚಪ್ಪಲಿಯ ಹೊಲಿಯುವ ಕಾರಣಕ್ಕೋ ಏನೋ .ಅವರ ಮಾತುಗಳು ಜೀವನದ ಯಾತ್ರೆಯ ಬಗ್ಗೆ ಗಿರಿಕಿ ಹೊಡೆಯುತ್ತಿರುತ್ತದೆ. ಅವತ್ತು ನನ್ನ ಚಪ್ಪಲಿ ಹರಿದಿದ್ದರಿಂದ ಅವರ ಬಳಿಗೆ ಹೋಗುವ ಪುಣ್ಯ ಲಭಿಸಿತು ಎಂದರೆ ತಪ್ಪಾಗಲಾರದು. ಅವತ್ತು ನನ್ನ ಕಾಲಿನ ಚಪ್ಪಲಿಯನ್ನ ಅವರ ಕೈಗೆ ಇಟ್ಟಾಗ ಅವರ ಬಾಯಿಂದ ಬಂದ ಮಾತುಗಳು ನೋಡು ಮಗಾ... ನಾವು ನಮ್ಮ ಆಗಮನಕ್ಕೆ ಮತ್ತು ನಿರ್ಗಮನಕ್ಕೆ  ಕೇಳಿಕೊಂಡು ಬಂದದ್ದಲ್ಲ. ಭಗವಂತ  ನಮಗೆ ಒಂದಷ್ಟು ಸಮಯವನ್ನು ನಿಗದಿಪಡಿಸಿರುತ್ತಾರೆ. ಆ ಸಂದರ್ಭದಲ್ಲಿ ಇದೆರಡರ ನಡುವೆ ನಮ್ಮ ಬದುಕು ಹೇಗೆ ರೂಪಿಸಿಕೊಳ್ಳುತ್ತವೆ ಅನ್ನೋದು ನಮಗೆ ಬಿಟ್ಟದ್ದು. ಕೆಲವು ಸಲ ನಿರ್ಗಮನದ ನಂತರ ಬೂದಿಯಾಗುವ ಮೊದಲು ಬೂದಿಯಾದ ನಂತರ ನೆನಪಿನ ಉಳಿಯುವಂತಹ ಕೆಲಸ ನಮ್ಮಿಂದ ಆಗಿರಬೇಕು ನೀನು ಧರಿಸಿದ ಚಪ್ಪಲಿ ಹರಿದಾಗ ಒಂದಷ್ಟು ಸಲ ಹೊಲಿದು ಮತ್ತೆ ಧರಿಸಬಹುದು ಆದರೆ ಅದರ ಮೂಲ ಸ್ವರೂಪದಲ್ಲಿ ಬದಲಾವಣೆ ಆಗಿರುತ್ತದೆ. ನಿನ್ನನ್ನು ತೊರೆದು ಹೊರಡುವವರು ಸಿಗುತ್ತಾರೆ ಯಾವುದು ಶಾಶ್ವತ ಅಲ್ಲ ಅಂದಮೇಲೆ ನೀನೂ ಅಲ್ಲ. ಇಂತಿಷ್ಟು ಸಮಯವಕಾಶ ಮಾತ್ರ ನಿನ್ನದು, ಪರಿಧಿಯೊಳಗೆ ಬದುಕು ಹೇಗಿರಬೇಕು ಅನ್ನೋದನ್ನ ನೀನೇ ನಿರ್ಧರಿಸಿಕೊಂಡು ಹಾಗೆ ಬದುಕಿದರೆ ನಿನ್ನನ್ನ ಕಳುಹಿಸಿಕೊಟ್ಟನು ಸ್ವಲ್ಪ ಸಂಭ್ರಮಪಡಬಹುದು. ಚಪ್ಪಲಿ ಹೋಲಿದಾಗಿತ್ತು ನನ್ನ ಮನಸ್ಸಿನಲ್ಲಿದ್ದ ಒಂದಷ್ಟು ಬಿರುಕುಗಳನ್ನು ಕೂಡ ಹಾಗಾಗಿ ಕಾಲಿಗೆ ಚಪ್ಪಲಿ ಧರಿಸಿ ಮನಸ್ಸಿನಲ್ಲಿರುವ ಪ್ರಶ್ನೆಗಳನ್ನು ಬದಿಗೆ ಸರಿಸಿ ದೃಢವಾದ ಹೆಜ್ಜೆಯಿಂದ ಮನೆ ಕಡೆಗೆ ಹೆಜ್ಜೆ ಇರಿಸಿದೆ.

-ಧೀರಜ್ ಬೆಳ್ಳಾರೆ

ಚಿತ್ರ ಕೃಪೆ: ಇಂಟರ್ನೆಟ್ ತಾಣ