ಸ್ಟೇಟಸ್ ಕತೆಗಳು (ಭಾಗ ೩೨೩) - ಮಣ್ಣು

ಸ್ಟೇಟಸ್ ಕತೆಗಳು (ಭಾಗ ೩೨೩) - ಮಣ್ಣು

ನೆಲದೊಳಗಿನಿಂದ ಎದ್ದ ಸಣ್ಣ ಸತ್ವಕ್ಕೆ ಕಾಯಾಗುವ ಭಾಗ್ಯ ಸಿಕ್ಕಿತು. ಮೊದಲು ಹೂವಿನಿಂದ ಮೀಡಿಯಾಯಿತು, ಮಿಡಿದು ಹಣ್ಣಾಗುವ ಸಂದರ್ಭದಲ್ಲಿ ಅದರ ತಲೆಯೊಳಗೆ ಒಂದು ಸಣ್ಣ ಯೋಚನೆ ನಾನು ನೆಲವನ್ನು ಬಿಟ್ಟು ಮೇಲೆದ್ದು ನಿಂತಿದ್ದೇನೆ ನೋಡಲು ಸುಂದರವಾಗಿ ಹೊಸರೂಪವನ್ನು ಪಡೆದಿದ್ದೇನೆ, ಬಣ್ಣ ಆಕಾರ ಎಲ್ಲದರಲ್ಲೂ ಶ್ರೇಷ್ಠತೆಯನ್ನು ಹೊಂದಿದ್ದೇನೆ ಹೀಗಿದ್ದಾಗ ನಾನು ಮತ್ತೆ ನೆಲವನ್ನು ಏಕೆ ಅವಲಂಬಿಸಬೇಕು ಅನ್ನುವ ಅಹಂಕಾರ ತಲೆದೋರಿತು. ಹಾಗಾಗಿ ನಾನು ಹಣ್ಣಾಗಿಯೇ ಇರುತ್ತೇನೆ ಎನ್ನುವ ಭಾವವನ್ನು ಗಟ್ಟಿಯಾಗಿ ಭದ್ರಪಡಿಸಿಕೊಂಡಿತ್ತು. ಆದರೆ ಕಾಲ ನಿಲ್ಲುವುದಿಲ್ಲ ಹಣ್ಣಾಯಿತು ಒಂದಷ್ಟು ಕಲ್ಲೇಟುಗಳನ್ನು ತಪ್ಪಿಸಿಕೊಂಡಿತ್ತು ಕೊನೆಗೆ ಮರದಿಂದ ಅಸ್ತಿತ್ವವನ್ನು ಕಳೆದುಕೊಂಡು ನೆಲಕ್ಕೆ ಬಿದ್ದಾಗ  ಅದರೊಳಗಿನ ಅಹಂಕಾರ ಮತ್ತೆ ಮೇಲೆದ್ದು ನಿಂತಿತು. ನಾನು ಈ ನೆಲದ ಮೇಲೆ ನಿಲ್ಲುವುದಿಲ್ಲ ಅನ್ನೋ ಕಾರಣಕ್ಕೆ ಅಲ್ಲಿಂದ ನೀರನ್ನು ಅವಲಂಬಿಸಿ ತೇಲುತ್ತಾ ಇದ್ದಹಾಗೆ ಸುತ್ತಮುತ್ತ ಮೀನುಗಳು ತಿನ್ನುವುದಕ್ಕೆ ಆರಂಭ ಮಾಡಿದವು, ಮೈಯೆಲ್ಲಾ ಕೊಳೆಯಲಾರಂಭಿಸಿತು. ಬದುಕು ಅಸಹ್ಯ ಅನ್ನಿಸಿತು. ಗಟ್ಟಿನೆಲೆ ಏನಾದ್ರೂ ಇದೆಯೋ ಅನ್ನೋ ಕಾರಣಕ್ಕೆ ಹುಡುಕಿಕೊಂಡು ದೊಡ್ಡ ಸಿಮೆಂಟಿನ ಪ್ರದೇಶದಲ್ಲಿ ಹೋಗಿಬಿತ್ತು. ನೆಲದ ಬಿಸಿಗೆ ಸುಟ್ಟುಕೊಂಡು ಸಾಯುವ ಯಾತನೆಯನ್ನು ಅನುಭವಿಸಿ ಬೇಡ ನಾನು ಗಾಳಿಯಲ್ಲಿ ಹಾರುತ್ತೇನೆ ಎಂದು ಹಾರಲಾರಂಭಿಸಿತು, ಆದರೆ ಅಲ್ಲೂ ಸ್ಥಿರತೆ ಇಲ್ಲದೆ ಗತಿಯಿಲ್ಲದೆ ಕೊನೆಗೆ ಮತ್ತೆ ನೆಲಕ್ಕೆ ಬಂದು ಬಿದ್ದಿತು. ನೆಲದೊಳಗಿನ ತಂಪು ನಿಧಾನವಾಗಿ ಹಣ್ಣನ್ನು ಮೃದುವಾಗಿ ಸ್ಪರ್ಶಿಸಿತು, ಇಷ್ಟು ಸಮಯದವರೆಗೆ ಅನುಭವಿಸಿದ ನೋವುಗಳು ಒಂದು ಕ್ಷಣದಲ್ಲಿ ಮಾಯವಾಯಿತು. ಮಣ್ಣೊಳಗೆ ಇರುವ ಮನಸ್ಸಾಯಿತು. ಇಲ್ಲಿಯೇ  ಸಂಭ್ರಮವನ್ನು ಹುಡುಕುವ ತೆರದಿ ಬೇರುಗಳನ್ನು ಇಳಿಸುತ್ತಾ ಸಾಗಿತು, ಬೇರುಗಳು ನೆಲಕ್ಕಿಳಿದಂತೆ ಚಿಗುರುಗಳು ಮೇಲೆದ್ದು ನಿಂತು, ಗಿಡವಾಯಿತು. ಸ್ವಲ್ಪಸ್ವಲ್ಪವೇ ನೀರನ್ನು ಪಡೆದು ಮರವಾಯಿತು, ಮರವಾಗಿ ಎಲೆಗಳನ್ನು ಬಿಟ್ಟು ಪ್ರಾಣಿ-ಪಕ್ಷಿಗಳಿಗೆ ಆಶ್ರಯವಾಗಿ ಹೂವಾಗಿ ಹಣ್ಣಾಗಿ ಬದುಕಿನ ಸಾರ್ಥಕತೆಯನ್ನು ಕಂಡಿತು. ಇಷ್ಟಪಡದ ಮಣ್ಣೇ ಜೀವನದ ಅಂತ್ಯಕ್ಕೆ ಆಸರೆಯಾದದ್ದನ್ನ ಕಾಲವೇ ಅರ್ಥ ಮಾಡಿಸಿತ್ತು.

-ಧೀರಜ್ ಬೆಳ್ಳಾರೆ

ಚಿತ್ರ ಕೃಪೆ: ಇಂಟರ್ನೆಟ್ ತಾಣ