ಸ್ಟೇಟಸ್ ಕತೆಗಳು (ಭಾಗ ೩೨೪) - ಬೇಡಿಕೆ

ನೀನು ಮೊನ್ನೆಯ ಅನಾಮಿಕನ ಅಂತರಂಗ ಓದಬೇಕಿತ್ತು. ಅದರಲ್ಲಿ ಕೊನೆಗೊಂದು ವಾಕ್ಯ ಇತ್ತು. " ಹೋ ಗೆಳೆಯರೇ ನೀವತ್ತು ದಿನಕ್ಕೊಂದು ಹುಡುಗಿ ಹೆಸರನ್ನು ನನಗೆ ಕಾಡಿಸಿ ಕರೆಯೋ ಬದಲು ಒಬ್ಬಳ ಹೆಸರನ್ನೇ ಕರೀರಿ" ಅಂತ. ಆದರೆ ನಮ್ಮ ಕತೆ ಯಾರಿಗೆ ಹೇಳೋಣ ನಮ್ಮನ್ನ ಕಾಡಿಸೋರೆ ಇಲ್ಲ. ಕರಿಯೋದಕ್ಕೆ ಹೆಸರಾದರೂ ಸಿಗಬೇಕಲ್ವಾ? ನನಗೆ ಯಾರನ್ನೂ ಇಮ್ಯಾಜಿನ್ ಮಾಡಿಕೊಳ್ಳಲು ಬರ್ತಾ ಇಲ್ಲ, ಯಾವ ಹುಡುಗಿಯರು ನನ್ನ ಹತ್ತಿರ ಬಂದು ಮಾತಾಡ್ತಾ ಇಲ್ಲ, ನಮಗೆ ಬೇರೆ ಹೋಗಿ ನಿಂತು ಮಾತನಾಡುವ ಧೈರ್ಯವಿಲ್ಲ.
ಹೀಗಿದ್ದರೂ ಆಸೆಯಿದೆ, ನಮ್ಮ ಫ್ರೆಂಡ್ಸ್ ಯಾರನ್ನಾದರೂ ಕಾಡಿಸಬಹುದು ಅಂತ. ಆದರೆ ಬಡ್ಡಿಮಕ್ಕಳು ಅವಳು ನನ್ನನ್ನು ನೋಡಿ ನಕ್ಕಳು, ನನ್ನತ್ರ ಮಾತಾಡಿದಳು, ಇವಳು ನನ್ನೇ ನೋಡಿದಳು, ಅವಳಿಗೆ ನಾನಂದ್ರೆ ಇಷ್ಟ ಇರಬಹುದು, ಹೀಗೆ ಅವರವರ ಕಥೆಗಳನ್ನು ಬೆಳೆಸುತ್ತಾ ಹೋಗುತ್ತಾರೆ ಅದಕ್ಕೆ ಒಂದಷ್ಟು ಉಪ್ಪು ಹುಳಿ ಖಾರ ಸೇರಿಸಿ ಏನೇನೋ ಹೇಳುತ್ತಾರೆ. ಅವರಿಗೆ ಒಂದೇ ದಿನವೂ ಇಲ್ಲ ನಾನೊಬ್ಬ ಏಕಾಂಗಿ ಆಗಿದ್ದೇನೆ. ನನ್ನ ಖುಷಿಗಾದರೂ ಒಂದು ಹೆಸರನ್ನು ಹೇಳಬೇಕು ಅಂತ ಅನ್ನಿಸಿಯೇ ಇಲ್ಲ. ಆದರೂ ಪರವಾಗಿಲ್ಲ ನನಗೂ ಒಂದು ದಿನ ಬರುತ್ತೆ ನನಗೂ ಒಂದು ಹುಡುಗಿ ಇಷ್ಟ ಆಗ್ತಾಳೆ ಅಥವಾ ನಾನು ಯಾವುದಾದರೂ ಒಂದು ಹುಡುಗಿಗೆ ಇಷ್ಟ ಆಗ್ತೇನೆ, ಅವಳು ನನ್ನ ಹತ್ತಿರ ಮಾತಾಡುತ್ತಾಳೆ ,ನನ್ನ ಮನಸ್ಸಿನಲ್ಲಿರುವ ಭಾವನೆಗಳನ್ನು ಅವಳ ಜೊತೆ ಹಂಚಿಕೊಳ್ಳುತ್ತೇನೆ, ನಾವಿಬ್ರೂ ತಿರುಗಾಡೋಕೆ ಹೋಗ್ತೇವೆ ಮತ್ತು ಮುಂದೊಂದಿನ ಜೊತೆಯಾಗ್ತೇವೆ. ಅವತ್ತು ಮದುವೆಗೆ ಈ ಫ್ರೆಂಡ್ಸ್ ಅಂತ ಇದ್ದಾರಲ್ವಾ ಅವರನ್ನು ಕರಿಯುತ್ತೇನೆ, ಬಂದವರು ನೋಡ್ಕೊಂಡು ಹೊಟ್ಟೆ ಉರಿಯಲಿ. ಅಲ್ಲ ನಾನು ಇಷ್ಟೆಲ್ಲ ಮಾತಾಡುತ್ತಿದ್ದೇನೆ, ನನ್ನ ಫ್ರೆಂಡ್ಸ್ ಅಲ್ಲಿ ಮೂಲೆಯಲ್ಲಿ ನಿಂತುಕೊಂಡು ಯಾರದೋ ಕಥೆ ಕಟ್ಟುತ್ತಿದ್ದಾರೆ. ಅಲ್ಲ ನಿಮಗೆ ನಿನ್ನೆ ಸಂಜೆ ಹೋಗುವಾಗ ಐಸ್ ಕ್ರೀಮ್ ಕೊಡಿಸಿದ್ದೇನೆ ಅಲ್ವಾ ಆ ಕಾರಣಕ್ಕಾದರೂ ಯಾವುದಾರೂ ಒಂದು ಹೆಸರನ್ನು ಸುಮ್ಮನೆ ಆದರು ಹೇಳ್ರೋ ಮಾರಾಯಾ…
-ಧೀರಜ್ ಬೆಳ್ಳಾರೆ
ಚಿತ್ರ ಕೃಪೆ: ಇಂಟರ್ನೆಟ್ ತಾಣ