ಸ್ಟೇಟಸ್ ಕತೆಗಳು (ಭಾಗ ೩೨೫) - ನಿಲ್ದಾಣ

ಸ್ಟೇಟಸ್ ಕತೆಗಳು (ಭಾಗ ೩೨೫) - ನಿಲ್ದಾಣ

ಮುಂದೇನು ಮಾಡಬೇಕು ಅನ್ನೋದು ನಂಗೆ ಗೊತ್ತಾಗ್ತಾ ಇಲ್ಲ ಹಾಗಾಗಿ ಕಾಲೇಜಿನ ಗೇಟಿನ ಬಳಿ ನಿಂತಿದ್ದೆ. ಯಾವ ಕಡೆ ಹೋಗಬೇಕು, ಏನು ನಿರ್ಧಾರ ತೆಗೆದುಕೊಳ್ಳಬೇಕು ಅನ್ನೋದು ಗೊತ್ತಾಗ್ಲಿಲ್ಲ. ವಾಚ್ ಮೆನ್ ವಿಠಲಣ್ಣ ಹತ್ತಿರ ಬಂದು "ಯಾಕೆ ಸರ್ ಏನೋ ಬಾರಿ ಟೆನ್ಶನ್ ಅಲ್ಲಿ ಇರೋ ಹಾಗಿದೆ, ನೋಡಿ ನಮ್ಮ ಜೀವನ ಒಂದು ರೈಲಿನ ಪ್ರಯಾಣದ ಹಾಗೆ . ಎಲ್ಲಾ ರೈಲಿಗೂ ಒಂದು ಕಡೆಯ ನಿಲ್ದಾಣ ಇರುತ್ತೆ. ಆ ಕಡೆಯ ನಿಲ್ದಾಣ ತಲುಪಿದ ಮೇಲೆ ಇಲ್ಲ ನಾನು ಬರೋದಿಲ್ಲ ಇಲ್ಲೇ ಇದ್ದು ಬಿಡ್ತೀನಿ ಅನ್ನೋದೆಲ್ಲಾ ಮೂರ್ಖತನ. ಒಂದಾದರೆ ರೈಲಿಗೇ ನಿಮ್ಮ ಮೇಲೆ ಅಸಹ್ಯ ಬಂದು ನಿಮ್ಮನ್ನು ಹೊರಗೆ ಹಾಕಬಹುದು ಅಥವಾ ಜನರೇ ನೋಡದ ಜಾಗದಲ್ಲಿ ನೀವಿದ್ದು ಬಿಟ್ಟು ನೀವು ಯಾರ ಗಮನಕ್ಕೂ ಬರದೆ ಮೂಲೆಗುಂಪಾಗಬಹುದು. ನಿಮ್ಮಲ್ಲಿ ಪ್ರತಿಭೆ ಇದ್ರೆ ನೀವೇ ನಿಮ್ಮದೇ ಒಂದು ನಿಲ್ದಾಣವನ್ನು ಸೃಷ್ಟಿಸಿಕೊಳ್ಳಿ, ಕ್ರಿಯಾತ್ಮಕವಾಗಿ ನಿಮ್ಮ ಜೀವನಕ್ಕೆ ತುಂಬಾ ಉಪಯೋಗಗಳಾಗಲಿ ಅದು ಬಿಟ್ಟು ನನಗೆ ಇದೇ ನಿಲ್ದಾಣ ಬೇಕು ಅಂತ ಬಯಸುವುದಕ್ಕಿಂತ, ಬದಲಾಯಿಸಿ ರೈಲು ಬದಲಾಯಿಸಿ ಹೊಸದೊಂದು ದಾರಿಯಲ್ಲಿ ಸಾಗಿ. ಒಟ್ಟಿನಲ್ಲಿ ನೀವಾಗಿಯೇ ಇದು ನನ್ನ ಕೊನೆಯ ನಿಲ್ದಾಣ ಅನ್ನುವ ನಿರ್ಧಾರಕ್ಕೆ ಬರಬೇಡಿ. ಕೊನೆ ಅನ್ನೋದು ಆ ಮೇಲಿನವನು ಬರೆದಿರುತ್ತಾನೆ ಅಲ್ಲಿಗೆ ತನ್ನಷ್ಟಕ್ಕೆ ಕೊನೆಯಾಗುತ್ತೆ ಹಾಗಾಗಿ ಯಾವುದೋ ಒಂದು ನಿಲ್ದಾಣ ಕೊನೆಯಾದಾಗ ಅದನ್ನ ಇಳಿದು ಇನ್ನೊಂದು ರೈಲನ್ನೇರಿ ಮುಂದಿನ ಪಯಣ. ನನಗೆ ಮನೆಗೆ ಹೋಗುವ ಹೊತ್ತಾಯಿತು ಬರ್ತಿನಿ ಸರ್ ನಾಳೆ ಸಿಗುವ "ಅವರ ಮಾತು ಯಾಕೋ ಹೌದು ಅನಿಸಿತು, ಅದೇ ನಿಲ್ದಾಣದಲ್ಲಿ ಇಷ್ಟು ದಿನ ಯಾಕೆ ಕಾದೆ, ನಿರ್ಧಾರ ಮಾಡಿ ಅಲ್ಲಿಂದ ಹೊರಟುಬಿಟ್ಟೆ…

-ಧೀರಜ್ ಬೆಳ್ಳಾರೆ

ಚಿತ್ರ ಕೃಪೆ: ಇಂಟರ್ನೆಟ್ ತಾಣ