ಸ್ಟೇಟಸ್ ಕತೆಗಳು (ಭಾಗ ೩೨೬) - ತಬ್ಬಿಕೊಳ್ಳು

ಸ್ಟೇಟಸ್ ಕತೆಗಳು (ಭಾಗ ೩೨೬) - ತಬ್ಬಿಕೊಳ್ಳು

ಮಂಗಳೂರಿಗೆ ಬಸ್ಸಿನಲ್ಲಿ ಚಲಿಸುತ್ತಾ ಇದೆ. ಬಸ್ಸು ಅಂದ ಕೊಡ್ಲೇ ಅದರಲ್ಲಿ ಬೇರೆ ಬೇರೆ ಕಾರಣಕ್ಕೆ ಬೇರೆ ಬೇರೆ ಮನಸ್ಥಿತಿಯ ವ್ಯಕ್ತಿಗಳು ಒಂದು ಸ್ಥಳದಿಂದ ಇನ್ನೊಂದು ಸ್ಥಳಕ್ಕೆ ಪಯಣವನ್ನ ಆರಂಭಿಸಿರುತ್ತಾರೆ. ಕೆಲವರ ಪ್ರಯಾಣ ತುಂಬಾ ಮುಖ್ಯವಾಗಿದ್ದರೆ ಕೆಲವರದ್ದು ಅಷ್ಟೇನು ಮುಖ್ಯವಾಗಿರುವುದಿಲ್ಲ. ಅಲ್ಲಿ ಹಲವು ಮನಸ್ಥಿತಿಗಳು ಸಿಗುತ್ತವೆ ಅನ್ನೋ ಈ ಕಾರಣಕ್ಕೆ ನಾನು ಹೆಚ್ಚಾಗಿ ಕಣ್ಣು ಮತ್ತು ಕಿವಿ ಎರಡನ್ನು ತೆರೆದು ಬಸ್ಸಿನಲ್ಲಿ ಕುಳಿತುಕೊಳ್ಳುತ್ತೇನೆ. ಇಂದು ಹೊರಟ ಬಸ್ಸಿನಲ್ಲಿ ನನ್ನ  ಕಣ್ಣಿಗಿಂತ ಕಿವಿ ಸ್ವಲ್ಪ ಹೆಚ್ಚು ಕೆಲಸವನ್ನ ಮಾಡ್ತಿತ್ತು. 

ನನ್ನ ಹಿಂದಿನ ಸೀಟಿನಿಂದ ಮಾತುಗಳು ಕೇಳಲಾರಂಬಿಸಿದವು. ನೋಡು ನೀನು ಒಂದು ಸಲ ಯೋಚನೆ ಮಾಡು ದೈಹಿಕವಾಗಿ ಒಬ್ಬ ವ್ಯಕ್ತಿಯನ್ನು ನೀನು ತುಂಬಾ ಹೊತ್ತು ತಬ್ಬಿಕೊಂಡಿದ್ದರೆ ಅದು ನೋವು ಕೊಡಬಹುದು ಅಥವಾ ಸಾಕೆನಿಸಬಹುದು ಹಾಗಾಗಿ ತಬ್ಬಿಕೊಳ್ಳುವುದು ಕೆಲವು ಕ್ಷಣಗಳ ಕೆಲಸ ಹಾಗೆಯೇ ಮನಸಿನಲ್ಲೂ ಕೂಡ ನಾವು ಒಂದಷ್ಟು ವಿಚಾರಗಳನ್ನು ವಿಪರೀತವಾಗಿ ತಬ್ಬಿಕೊಂಡಿದ್ದೇವೆ. ಇಲ್ಲಿ ನಿನ್ನ ಆಸಕ್ತಿಗಳು ಬದಲಾಗಬೇಕು, ಇಲ್ಲದಿದ್ದರೆ ನೀನು ಇಷ್ಟಪಟ್ಟಿರುವ ಆಸಕ್ತಿಗೆ ಅಥವಾ ನಿನಗೆ ಆ ವಿಚಾರ ಬೇಡ ಅನಿಸುವ ಮಟ್ಟಕ್ಕೆ ರೇಜಿಗೆ ಹುಟ್ಟಿಸುತ್ತದೆ. ದಿನ ಕ್ಷಣ ವಾರ ವರ್ಷಗಳ ವಿರಾಮದ ನಂತರ ತಬ್ಬಿಕೊಂಡರೆ ಹೊಸತೇನೋ ಸಿಗಬಹುದು". 

ನನಗೆ ಇಳಿಯುವ ನಿಲ್ದಾಣ ಬಂತು. ಪಯಣ ಒಂದು ಸುಂದರ ಪಾಠವನ್ನು ಕಲಿಸಿ ಹೋಗಿತ್ತು. ಹಾಗಾಗಿ ನನ್ನೆರಡು ನಿರ್ಧಾರಗಳನ್ನು ಬದಲಾಯಿಸಿ ಅಲ್ಲಿಂದ ಹೊರಟೆ.

-ಧೀರಜ್ ಬೆಳ್ಳಾರೆ

ಚಿತ್ರ ಕೃಪೆ: ಇಂಟರ್ನೆಟ್ ತಾಣ