ಸ್ಟೇಟಸ್ ಕತೆಗಳು (ಭಾಗ ೩೨೯) - ವಿಪರ್ಯಾಸ

ಮನೆಯವರು ತೋರಿಸಿದವರನ್ನೇ ಮದುವೆಯಾದವಳು ಆಕೆ. ಮನೆ ಪರಿಸ್ಥಿತಿ ವಾತಾವರಣ ತಿಳಿಯುವ ಮೊದಲೇ ಮೊದಲ ಮಗ ಹುಟ್ಟಿಯಾಗಿತ್ತು. ವರ್ಷದ ಒಳಗೆ ಮತ್ತೆರಡು ಹುಟ್ಟಿದವು. ಮೂರು ಮಕ್ಕಳು ಗಂಡ ಅತ್ತೆ ಮಾವ ಇವರನ್ನ ಸಂಭಾಳಿಸುತ್ತಲೇ ತಾನು ಕೆಲಸಕ್ಕೆ ಹೋಗುತ್ತಾ ಬದುಕು ಸಾಗಿಸಿದಳು. ಕಾಲವು ಯಾರಿಗೂ ಕಾಯುವುದಿಲ್ಲ, ಕಾಯಿಸುವುದು ಇಲ್ಲ. ಅವಘಡವೋ ದೇವನಿರ್ಣಯವೋ ಗೊತ್ತಿಲ್ಲ ಮೂರು ಜನ ಮಕ್ಕಳು ಮತ್ತು ಇವಳನ್ನ ಹೊರತುಪಡಿಸಿ ಉಳಿದವರೆಲ್ಲರೂ ದೈವಾಧೀನರಾದರು. ಜವಾಬ್ದಾರಿ ದೊಡ್ಡದಾಯಿತು. ಮಕ್ಕಳ ಶಿಕ್ಷಣಕ್ಕೆ ರಾತ್ರಿ-ಹಗಲು ದುಡಿಬೇಕಾಯಿತು.
ದುಡ್ಡನ್ನ ಕೂಡಿಟ್ಟಳು. ಮಕ್ಕಳ ಓದುವಿಕೆಯು ಊರನ್ನ ದಾಟಿತು ಕೆಲಸ ಹೊರ ಊರಿಗೂ ತಲುಪಿಸಿತು. ಆಕೆ ಕೆಲಸ ನಿಲ್ಲಿಸಲಿಲ್ಲ. ತಾನು ಕೂಡಿಟ್ಟ ದುಡ್ಡಿನಿಂದ ಜಾಗ ಖರೀದಿಸಿದ್ದು ಕೃಷಿ ಕೆಲಸ ಆರಂಭಿಸಿದಳು. ಮಕ್ಕಳು ಹೇಗಿದ್ದೀಯಾ ಅಂತ ಕೇಳೋಕು ಬರಲಿಲ್ಲ. ಒಂದು ದಿನ ದೈವ ನಿರ್ಣಯದಂತೆ ಅವಳ ಉಸಿರೂ ನಿಂತಿತ್ತು. ದೊಡ್ಡ ಕಾರುಗಳು ಮನೆ ಮುಂದೆ ಬಂದು ನಿಂತವು. ತಾಯಿಯನ್ನು ಕಳೆದುಕೊಂಡ ದುಃಖವೂ ಇರಲಿಲ್ಲ. ಸತ್ತ ತಾಯಿಯ ಹೆಬ್ಬೆರಳಿಗೆ ಶಾಯಿ ಒತ್ತಿ ಆಸ್ತಿ ಪತ್ರಕ್ಕೆ ರುಜು ಹಾಕಿಸಿ ಹೊರಟು ಬಿಟ್ಟರು. ಗಾಡಿಯ ಚಕ್ರದ ಧೂಳು ಹೆಣದ ಮೇಲೆ ಬಿತ್ತು. ಚಿತೆ ಏಕಾಂಗಿಯಾಗಿ ಉರಿಯಿತು.
-ಧೀರಜ್ ಬೆಳ್ಳಾರೆ
ಚಿತ್ರ ಕೃಪೆ: ಇಂಟರ್ನೆಟ್ ತಾಣ