ಸ್ಟೇಟಸ್ ಕತೆಗಳು (ಭಾಗ ೩೩೦) - ಪಯಣ
ನಾವು ಚಲಿಸುವ ಗಾಡಿಯ ಕಾರಣದಿಂದ ನಮಗೆ ಕಾಣುವ ದೃಶ್ಯಗಳು ಬೇರೆ ಬೇರೆಯಾಗಿರುತ್ತವೆ. ನಾವು ನಡೆದು ಹೊರಟರೆ ನಮಗೆ ನಡೆಯುವ ಜೀವನ ಕಾಣುತ್ತದೆ. ಸುತ್ತಮುತ್ತ ಸಣ್ಣಸಣ್ಣ ಕೆಲಸಗಳನ್ನು ಮಾಡುತ್ತಾ, ನೋವನ್ನ ಹಂಚಿಕೊಳ್ಳುತ್ತಾ, ಖುಷಿಯನ್ನ ಅನುಭವಿಸುತ್ತಾ, ಜೀವನದ ಸಣ್ಣ ಕ್ಷಣಗಳನ್ನು ಅನುಭವಿಸುವ ಪುಟ್ಟ ಹೃದಯಗಳು ಕಾಣಸಿಗುತ್ತವೆ. ಅದೇ ನಾವು ಬೈಕನ್ನೇರುತ್ತೇವೆ ಎಂದಾದರೆ ನಮಗೆ ವೇಗಗಳ ಜೊತೆಗೆ ಸಾಗುವ ಸಹವರ್ತಿಗಳು, ತುರ್ತು ಕೆಲಸದಲ್ಲಿರುವವರು, ಅವರೇನು ಮಾಡುತ್ತಿರಬಹುದು ಅನ್ನುವ ಯೋಚನೆಯನ್ನು ಹುಟ್ಟಿಸುವವರು ಸಿಕ್ಕಿಬಿಡುತ್ತಾರೆ. ಬಸ್ಸಿನಲ್ಲಿ ಚಲಿಸುವುದಾದರೆ ಕಾರಣವನ್ನು ಇಟ್ಟುಕೊಂಡು ಹೊರಟವರು, ಕಾರಣವನ್ನು ಹುಡುಕಿ ಹೊರಟವರು, ಸುಮ್ಮನೆ ಹೊರಟವರು ವಿವಿಧ ಭಾವನೆಗಳ ವಿವಿಧ ಅಭಿವ್ಯಕ್ತಿಗಳು ಒಂದೇ ಕಡೆ ಸಿಗುತ್ತಾರೆ, ಜೊತೆಗೆ ಸಣ್ಣ ಕಿಟಕಿಯಲ್ಲಿ ದೊಡ್ಡ ಘಟನೆಗಳು ಕ್ಷಣದಲ್ಲಿ ಹಾದುಹೋಗುತ್ತವೆ. ಆಕಾಶದಲ್ಲಿ ಹಾರುತ್ತೇವಾದರೆ ಸಣ್ಣದು ಕಾಣಿಸುವುದಿಲ್ಲ. ನಾವು ತಲುಪುವ ಜಾಗ ಒಂದೇ ಆದರೂ ಪಯಣಿಸುವ ವಾಹನದ ಮೇಲೆ, ಪಯಣಿಸುವ ಮಾರ್ಗದ ಮೇಲೆ ಘಟನೆಗಳು ಬೇರೆಬೇರೆಯಾಗಿ ಕಾಡುತ್ತದೆ. ಆಯ್ಕೆಯು ನಮ್ಮ ಮೇಲೆ ಬಿಟ್ಟಿರುತ್ತದೆ. ನಾನು ಹೇಗೆ ಪಯಣಿಸಬೇಕು, ಯಾವ ಘಟನೆಯನ್ನು ನೋಡಬೇಕು, ಯಾವುದು ನನ್ನ ಬದಲಾವಣೆಗೆ ಸ್ಪೂರ್ತಿಯಾಗುತ್ತದೆ ಅನ್ನೋದನ್ನ ಮೊದಲೇ ನಿರ್ಧರಿಸಿ ಅದರೊಂದಿಗೆ ಪಯಣಿಸಿದರೆ ಜೀವನಕ್ಕೆ ಸಾರ್ಥಕ್ಯ ಸಿಗಬಹುದು ಅನ್ನಿಸುತ್ತದೆ.
-ಧೀರಜ್ ಬೆಳ್ಳಾರೆ
ಚಿತ್ರ ಕೃಪೆ: ಇಂಟರ್ನೆಟ್ ತಾಣ