ಸ್ಟೇಟಸ್ ಕತೆಗಳು (ಭಾಗ ೩೩೧) - ಸೈಕಲ್

ಮೊದಲ ಬಾರಿಗೆ ಗೇರ್ ಸೈಕಲ್ ಬಿಡೋದಕ್ಕೆ ಆರಂಭ ಮಾಡಿದೆ. "ತುಂಬಾ ಸುಲಭ ಮಾರಾಯ ಏನು ಕಷ್ಟಪಡಬೇಕಿಲ್ಲ, ದೊಡ್ಡ ಎತ್ತರಗಳಿಗೆಲ್ಲಾ ಗೇರ್ ಗಳನ್ನು ಬದಲಿಸುತ್ತಾ ಹೋದರೆ ಸಾಕು ಸುಲಭವಾಗಿ ನೀನು ಮೇಲೇರಬಹುದು" ಅನ್ನೋದು ಗೆಳೆಯರು ಹೇಳುತ್ತಿದ್ದ ಮಾತು. ಇಷ್ಟರವರೆಗೂ ನಾನು ಅದನ್ನೇ ನಂಬಿದ್ದೆ. ಕಷ್ಟ ಏನು ಮೊದಲ ಬಾರಿಗೆ ಏರಿ ತುಳಿಯುವಾಗಲೇ ಗೊತ್ತಾದದ್ದು. ಯಾವ ಸಂದರ್ಭದಲ್ಲಿ ಗೇರ್ ಬದಲಾಯಿಸಬೇಕು ಎನ್ನುವ ಪರಿಜ್ಞಾನ ನಮ್ಮಲ್ಲಿರಬೇಕು, ಎಷ್ಟೊತ್ತಿಗೆ ಬದಲಿಸಬೇಕು ಎನ್ನುವ ಅರಿವಿಲ್ಲದಿದ್ದರೆ ನಡೆದು ತಲುಪುವುದು ಸುಲಭ ಎಂದು ಅನಿಸಿಬಿಡುತ್ತದೆ. ಜೊತೆಗೆ ನಮ್ಮ ದೇಹ ಮನಸ್ಥಿತಿಯೂ ಜೊತೆಗೆ ಹೊಂದಿಕೊಳ್ಳಬೇಕಾಗುತ್ತದೆ. ನಾನು ಕಾಲೇಜಿನಿಂದ ನನ್ನ ರೂಮು ತಲುಪುವುದರೊಳಗೆ ಜೀವನದ ದೊಡ್ಡ ಪಾಠವೇ ಸೈಕಲ್ ನನಗೆ ಕಲಿಸಿಕೊಟ್ಟಿತ್ತು. ಹೇಳೋದು ತುಂಬಾ ಸುಲಭ ಆದರೆ ಜೀವನದಲ್ಲಿ ಪರಿಸ್ಥಿತಿಯ ಒಳಗೆ ಇಳಿದಾಗ ಅದರ ಆಳ ಅಗಲಗಳ ಅರಿವಾಗುವುದು. ಯಾವ ಉಪಾಯಗಳನ್ನು, ಯಾವ ಯೋಜನೆಗಳನ್ನು ರೂಪಿಸಿಕೊಳ್ಳಬೇಕು ಅನ್ನೋದು ಗೊತ್ತಿದ್ದಾಗ ಮಾತ್ರ ತಲುಪುವ ಹಾದಿ ಸುಗಮವಾಗುತ್ತದೆ. ದಾರಿ ಮಧ್ಯದಲ್ಲೆಲ್ಲೋ ಕೈಕೊಡುವ ಸೈಕಲನ್ನು ಸರಿಮಾಡುವ ಕಲೆ ನಮಗೆ ಗೊತ್ತಿದ್ದರೆ ಗ್ಯಾರೇಜ್ ವರೆಗೆ ತಳ್ಳುವ ಪರಿಸ್ಥಿತಿ ಬರುವುದಿಲ್ಲ. ಜೀವನದಲ್ಲೂ ನಮ್ಮ ತಪ್ಪುಗಳನ್ನು ತಿದ್ದಿಕೊಂಡು ಸರಿಪಡಿಸಿಕೊಂಡು ಮುಂದುವರೆಯುವ ಧೈರ್ಯವಿರಬೇಕು. ಮೊದಲು ಕಷ್ಟವೆನಿಸುತ್ತದೆ, ಆದರೆ ದಿನಕಳೆದಂತೆ ಸುಲಭವಾಗುತ್ತದೆ, ಇಷ್ಟವೂ ಆಗುತ್ತದೆ. ಜೀವನವೂ ಹಾಗೆ. ಹಾಗಾಗಿ ಇವತ್ತಿನಿಂದ ನನ್ನ ಜೀವನದ ಗೇರು ಬದಲಾಗಿದೆ ಇನ್ನು ಸಾಗುವ ವೇಗ ಬೇರೆಯಾಗಿರುತ್ತದೆ.
-ಧೀರಜ್ ಬೆಳ್ಳಾರೆ
ಚಿತ್ರ ಕೃಪೆ: ಇಂಟರ್ನೆಟ್ ತಾಣ