ಸ್ಟೇಟಸ್ ಕತೆಗಳು (ಭಾಗ ೩೩೨) - ಕತ್ತಲೆ ಬೆಳಕು

ಬೆಳಗಿನ ಊರಿಗಿಂತ, ಕತ್ತಲೆಯ ಊರೇ ತುಂಬಾ ವಿಚಿತ್ರ ಮತ್ತು ತುಂಬಾ ಭಾವನಾತ್ಮಕವಾದದ್ದು. ಅವತ್ತು ಒಂದಷ್ಟು ಕತ್ತಲೆಯಲ್ಲಿ ಊರಿನೊಳಗೆ ಇರುವ ಸಂದರ್ಭ ಸೃಷ್ಟಿಯಾಯಿತು. ಆ ರಾತ್ರಿಯ ಹೊತ್ತು ನಿದ್ದೆಯ ಮಂಪರಿನಲ್ಲಿ ಇರುವ, ಕಣ್ಣಿನ ತಾಳವನ್ನು ಹಿಡಿತದಲ್ಲಿಟ್ಟುಕೊಂಡು ಕೆಲಸ ಮಾಡಲೇಬೇಕು ರಿಕ್ಷಾ ಓಡಿಸಲೇಬೇಕು. ಮನೆಯ ಸಾಲ, ಸಹೋದರಿಯ ಮದುವೆ ಇದೆಲ್ಲದರ ಜವಾಬ್ದಾರಿ ನಿಭಾಯಿಸೋಕೆ ರಾತ್ರಿ-ಹಗಲು ದುಡಿಯಬೇಕು. ಬೆಳಗಿನ ಹೊತ್ತು ಕಾಲೇಜು ರಾತ್ರಿಯ ಹೊತ್ತು ಅಮ್ಮ ಮಾಡಿಕೊಟ್ಟ ಚಹಾವನ್ನು ಮಾರಾಟ ಮಾಡಬೇಕು. ದೂರದೂರಿಗೆ ಬಸ್ಸಿನ ಸಮಯ ಗೊತ್ತಿಲ್ಲದೆ ಎಲ್ಲಾ ಬಸ್ಸಿನ ಬಳಿಯೂ ಹೋಗಿ ವಿಚಾರಿಸುತ್ತಾ ನಿಲ್ಲುವವರೊಂದು ಕಡೆ, ಕೆಲವರು ದುಃಖದಿಂದ ಕಳುಹಿಸುತ್ತಾರೆ, ಕೆಲವರು ಕಾಯುತ್ತಿದ್ದಾರೆ, ಕೆಲವರಿಗೆ ಇಡೀ ದಿನದ ವ್ಯಾಪಾರದ ಖುಷಿ, ಇನ್ನು ಕೆಲವರಿಗೆ ಏನೂ ಸಂಗ್ರಹವಾಗದ್ದಕ್ಕೆ ನೋವು, ಅಲ್ಯಾರೋ ಅಂಗಡಿಯಲ್ಲಿ ಕುಡಿಸುತ್ತಿದ್ದಾರೆ, ಆ ದಿನದ್ದು ಆ ದಿನಕ್ಕೆ ದುಡಿದು ತಿನ್ನುವವರು ಅಲ್ಲೇ ಬಸ್ಟ್ಯಾಂಡ್ನಲ್ಲಿ ನೆಮ್ಮದಿಯ ನಿದ್ದೆಯನ್ನು ಮಾಡಿದ್ದಾರೆ, ಪೊಲೀಸರು ಗಸ್ತು ತಿರುಗುತ್ತಿದ್ದಾರೆ, ಇದೆಲ್ಲವೂ ಬೆಳಗಿನ ಹೊತ್ತು ಕಾಣಸಿಗುವುದಿಲ್ಲ, ಕಂಡರೂ ಭಾವಗಳು ಬೇರೆ ಬೇರೆ ಇರುತ್ತವೆ. ಹಾಗಾಗಿ ಕತ್ತಲೆಯು ಎಷ್ಟು ಭೀಕರವೋ ಅಷ್ಟೇ ಭಾವನಾತ್ಮಕವಾದುದು. ಬೆಳಕಿನ ನಡುವೆ ಬದುಕಿದ ನಾವು ಆಗೊಮ್ಮೆ-ಈಗೊಮ್ಮೆ ಕತ್ತಲಿನ ನಡುವೆ ಹಾದು ಹೋದಾಗ ಬದುಕು ಇನ್ನಷ್ಟು ರುಚಿಸುತ್ತದೆ.
-ಧೀರಜ್ ಬೆಳ್ಳಾರೆ
ಚಿತ್ರ ಕೃಪೆ: ಇಂಟರ್ನೆಟ್ ತಾಣ