ಸ್ಟೇಟಸ್ ಕತೆಗಳು (ಭಾಗ ೩೩೩) - ಮೌನ

ಸ್ಟೇಟಸ್ ಕತೆಗಳು (ಭಾಗ ೩೩೩) - ಮೌನ

ನಮ್ಮ ಗದ್ದಲದ ನಡುವೆ ನಮಗೆ ನಮ್ಮ ಮಾತೇ ಕೇಳುತ್ತಿಲ್ಲ, ಹಾಗಿರುವಾಗ ನಮ್ಮ ಸುತ್ತಮುತ್ತ ಬದುಕುತ್ತಾ ಇರುವಂತಹ ಪ್ರಾಣಿ-ಪಕ್ಷಿಗಳ ಮಾತು ಹೇಗೆ ಕೇಳಲು ಸಾಧ್ಯ. ಅವುಗಳು ನಮ್ಮ ಜೊತೆ ಮಾತಾಡ್ಲಿಕ್ಕೆ ತುದಿಗಾಲಲ್ಲಿ ನಿಂತಿವೆ, ಯಾಕೆಂದರೆ ಅವುಗಳು ತುಂಬಾ ಮಾತನಾಡಿದ್ದಾವೆ ತಮ್ಮ ಜೊತೆಗೆ, ನಮ್ಮ ಶಬ್ದಗಳಿಂದ ಅವುಗಳಿಗೂ ಮಾತನಾಡಲಿಕ್ಕೆ ಇಲ್ಲದಂತಾಗಿಬಿಟ್ಟಿದೆ. ಆದರೆ ಅವುಗಳಿಗೆ ಸ್ವಲ್ಪ ವಿಶೇಷ ಪ್ರಾಣಿ ಅನ್ನಿಸಿಕೊಂಡಿರುವ ನಮ್ಮಗಳ ಜೊತೆ ಮಾತನಾಡಬೇಕು ಅನ್ನಿಸಿ ನಮ್ಮ ಗದ್ದಲಗಳನ್ನು ನೋಡಿ ಭಯಗೊಂಡು ದೂರ ಸರಿದಿದ್ದಾವೆ. ಇದು ಸುಳ್ಳು ಅನ್ನೋದಾದ್ರೆ ಒಂದು ಸಲ ಯಾವುದೇ ಶಬ್ದಗಳೇ ಇಲ್ಲದ ನಿಶಬ್ದ ಜಾಗದಲ್ಲಿ ನಿಮ್ಮ ಮನೆಯ ಯಾವುದಾದರೊಂದು ಪ್ರಾಣಿಯ ಜೊತೆಗೆ ಕುಳಿತುಕೊಳ್ಳಿ ಅದು ನಿಮ್ಮೊಂದಿಗೆ  ಸಂವಹನ ನಡೆಸಲು ಆರಂಭಿಸುತ್ತದೆ. ಯಾಕೆಂದರೆ ಅದಕ್ಕೆ ಮೌನವನ್ನು ಭೇದಿಸಿ ಸಂವಹನ ನಡೆಸುವ ಕಲೆಯ ಬಗ್ಗೆ ಗೊತ್ತಿದೆ, ಅದು ಅಗತ್ಯಕ್ಕಿಂತ ಹೆಚ್ಚಿನದ್ದೇನನ್ನು ನುಡಿಯುವುದಿಲ್ಲ, ಮನುಷ್ಯರ ಹಾಗೆ .ಹಾಗಾಗಿ ನಾವು ಒಂದಷ್ಟು ಗದ್ದಲವನ್ನು ಕಡಿಮೆ ಮಾಡಿದರೆ ಖುಷಿಗೆ ಇನ್ನೊಂದಷ್ಟು ಪೂರಕ ವಾತಾವರಣ ಸೃಷ್ಟಿಯಾಗಬಹುದು. ಇಷ್ಟರವರೆಗೆ ನಾವು ಮಾಡಿದ್ದೇ ನಮ್ಮ ಬದುಕಿನ ಖುಷಿ ಅಂತಾಂದುಕೊಂಡಿದ್ದೇವೆ. ಅದಕ್ಕಿಂತೂ ಮೀರಿದ ಖುಷಿ ಇದೆ ಅನ್ನೋದು ಗೊತ್ತಾಗಬೇಕು ಅಂದರೆ ನಮ್ಮ ಶಬ್ದಗಳನ್ನು ಒಂದು ಚೂರು ತಡೆಹಿಡಿಯಬೇಕು. ಮೌನದ ಒಳಗೆ ಇಳಿದು ನಿಂತು ಗಮನಿಸಿದರೆ ನಮ್ಮ ಸುತ್ತಮುತ್ತ ಹಲವಾರು ಜೀವಿಗಳು ನಮ್ಮೊಂದಿಗೆ ಮಾತನಾಡಲು ಕಾಯುತ್ತಿವೆ. ಮನಸ್ಸು ಮುಖ್ಯ ಮೌನವಾಗಿ ಬದುಕೋದು ಅದಕ್ಕಿಂತ ದೊಡ್ಡ ಮುಖ್ಯ. ಹಾಗಾಗಿ ಒಮ್ಮೆ ನಡೆದಾಡುವಾಗ ಒಮ್ಮೆ ಸುತ್ತಲಿನ ಗದ್ದಲವನ್ನು ಒಂದು ಚೂರು ನಿಲ್ಲಿಸಿ ನಮ್ಮ ಅಕ್ಕಪಕ್ಕದಲ್ಲಿ ನಮ್ಮ ಸಹವರ್ತಿಗಳ ಜೊತೆ ಮಾತನಾಡುವುದು ಒಳಿತು ಏನಂತೀರಿ ?

-ಧೀರಜ್ ಬೆಳ್ಳಾರೆ

ಚಿತ್ರ ಕೃಪೆ: ಇಂಟರ್ನೆಟ್ ತಾಣ