ಸ್ಟೇಟಸ್ ಕತೆಗಳು (ಭಾಗ ೩೩೬) - ನಾಯಿಯ ಕಥೆ

ಸ್ಟೇಟಸ್ ಕತೆಗಳು (ಭಾಗ ೩೩೬) - ನಾಯಿಯ ಕಥೆ

ಅದೊಂದು ಪೇಟೆ ಬೀದಿ. ಸುಮಾರು ಸಮಯದಿಂದ ಆ ಜಾಗ ತನ್ನದೆಂದು ಬದುಕುತ್ತಿದ್ದದ್ದು ಒಂದು ನಾಯಿ. ಪೇಟೆಯ ಮಧ್ಯಭಾಗದಲ್ಲಿರುವ ಒಂದು ಕರೆಂಟ್ ಕಂಬದ ಬುಡದಲ್ಲಿ ಅದರ ವಾಸ. ಅಲ್ಲಿಯೇ ಎರಡು ಹೋಟೆಲ್ ಗಳಲ್ಲಿ ಸಿಗುವ ಅನ್ನ, ಸುತ್ತಮುತ್ತಲಿನ ಜನಗಳ ಒಂದೆರಡು ಬೈಗುಳಗಳು, ಸದಾ ತೊಟ್ಟಿಕ್ಕುತ್ತಿರುವ ನಲ್ಲಿಯಲ್ಲಿ ಸುರಿಯುವ ನೀರು ಇದರ ಜೀವನಾಧಾರವಾಗಿತ್ತು. ಆ ದಿನ  ಬೇರೆ ಒಂದು ನಾಯಿ ಬೀದಿಯನ್ನ ದಾಟುತ್ತಿದ್ದಾಗ ಇದಕ್ಕೆ ಸಿಟ್ಟು ನೆತ್ತಿಗೇರಿ ಬೊಗಳುವುದಕ್ಕೆ ಆರಂಭಮಾಡಿತು. ಹತ್ತಿರ ಹೋಗಿ ಓಡಿಸಿತು. ಯಾಕೆಂದರೆ ಇದರ ಪ್ರದೇಶದಲ್ಲಿ ಇದರದ್ದೇ ಅಧಿಕಾರವಿರಬೇಕು ಅಂತೇನೋ ಆಗಿರಬಹುದು. ಮತ್ತೊಂದೆರಡು ದಿನ ಕಳೆದಾಗ ಮತ್ತೆ ಅದೇ ನಾಯಿ ಅಲ್ಲಿ ನೀರು ಕುಡಿಯುವುದಕ್ಕೆ ಬಂದಿತು ಆಗಲೂ ನೀರು ಕುಡಿಯದ ಹಾಗೆ ಮಾಡಿತು.ಆ ನಾಯಿ ಅಂತಲ್ಲ ಸುತ್ತಮುತ್ತ ಯಾವ ನಾಯಿ ಬಂದ್ರು ಕೂಡ ಅವುಗಳನ್ನು ಇಲ್ಲಿಂದ ಓಡಿಸಿ ಕಳುಹಿಸುತ್ತಿತ್ತು. ತನ್ನ ಪ್ರಾಬಲ್ಯ ಎಲ್ಲಿ ಕಡಿಮೆಯಾಗುತ್ತೋ, ತನಗೆ ಸಿಗುವ ಊಟ ಬೇರೆಯವರಿಗೆ ಹೋಗುತ್ತೋ ಅನ್ನೋ ಭಯ ಇರಬೇಕು. ಅವತ್ತು ಬೆಳಗ್ಗಿನ ಹೊತ್ತು ಯಾವುದೋ ಊರಿನ ಒಂದಷ್ಟು ನಾಯಿಗಳು ಅಲ್ಲಿಗೆ ಬಂದ ಕೂಡಲೇ ಇದರ ಬೊಗಳುವಿಕೆ ಆರಂಭವಾಯಿತು. ಕೂಡಲೇ ಆ ಎಲ್ಲಾ ನಾಯಿಗಳು ಇದರ ಮೇಲೆ ಆಕ್ರಮಣಕ್ಕೆ ಇಳಿದುಬಿಟ್ಟವು, ಅವುಗಳ ಬೊಗಳುವಿಕೆಯ ಮುಂದೆ ಇದರ ಬೊಗಳುವಿಕೆ ಕೇಳಲೇ ಇಲ್ಲ. ಇದು ಮೂಲೆಗೆ ಒರಗಿತು. ಅವುಗಳ ಪ್ರಾಬಲ್ಯ ಹೆಚ್ಚಾಗುತ್ತಿದ್ದ  ಹಾಗೇ ಎಲ್ಲಿತ್ತೋ ಏನೋ  ಪ್ರತಿಸಲವೂ ಓಡಿಸಿಕೊಳ್ಳಿತ್ತಿದ್ದ ನಾಯಿ ಓಡಿಬಂದು ಇದರ ರಕ್ಷಣೆಗೆ ನಿಂತು ಆ ಎಲ್ಲಾ ನಾಯಿಗಳನ್ನು ಓಡಿಸುವುದಕ್ಕೆ ಆರಂಭ ಮಾಡಿತು. ಎರಡು ನಾಯಿಗಳು ಸೇರಿ ಬಂದಷ್ಟು ನಾಯಿಗಳನ್ನು ಓಡಿಸಿ ಕಳುಹಿಸಿದವು. ಆ ದಿನದಿಂದ ಅಲ್ಲಿಯ ಹೋಟೆಲುಗಳ ಊಟ, ತೊಟ್ಟಿಕ್ಕುತ್ತಿರುವ ನೀರು, ಸುತ್ತಮುತ್ತಲಿನವರ ಬೈಗುಳ ಈ ಎರಡು ನಾಯಿಗಳಿಗೆ ಆಶ್ರಯತಾಣವಾಯಿತು. ಮತ್ತೆ ಬೇರೆ ಯಾವುದಾದರೂ ನಾಯಿಗಳು ಇಲ್ಲಿ ಹಾದುಹೋದರೆ ಎರಡು ನಾಯಿಗಳು ಸೇರಿಕೊಂಡು ಮತ್ತೆ ಅವುಗಳನ್ನು ಓಡಿಸಿ ಕಳಿಸ್ತಾ ಇದ್ದವು ಹೀಗೆ ಮುಂದುವರೆಯಿತು ನಾಯಿಯ ಕತೆ…

-ಧೀರಜ್ ಬೆಳ್ಳಾರೆ

ಚಿತ್ರ ಕೃಪೆ: ಇಂಟರ್ನೆಟ್ ತಾಣ