ಸ್ಟೇಟಸ್ ಕತೆಗಳು (ಭಾಗ ೩೩೯) - ವಿಪರ್ಯಾಸ

ಸ್ಟೇಟಸ್ ಕತೆಗಳು (ಭಾಗ ೩೩೯) - ವಿಪರ್ಯಾಸ

ನೇರ ರಸ್ತೆ ಆದ್ದರಿಂದ ಆತನ ವಾಹನದ ವೇಗಕ್ಕೆ ಇನ್ನಷ್ಟು ಹುಮ್ಮಸ್ಸು ಸಿಕ್ಕಿತ್ತು . ಜನರನ್ನು  ಕುಳ್ಳಿರಿಸಿಕೊಂಡು ಓಡುತ್ತಿರೋ ರಿಕ್ಷಾ ತನ್ನ ಮಾಮೂಲಿ ವೇಗವನ್ನು ಮೀರಿ ಇನ್ನಷ್ಟು ವೇಗವಾಗಿ ಡಾಮರು ರಸ್ತೆಯನ್ನು ಒರೆಸಿಕೊಂಡೇ ಸಾಗುತ್ತಿತ್ತು .

ಜನರ್ಯಾರೂ ರಸ್ತೆಯಲ್ಲಿ ಕಾಣುತ್ತಿರಲಿಲ್ಲ. ಸಣ್ಣ ತಿರುವಿನಲ್ಲಿ ಎದುರಿನಿಂದ ಬರುತ್ತಿದ್ದ ಸೈಕಲ್ ಗೆ ವೇಗವನ್ನು ನಿಯಂತ್ರಿಸಲಾಗದೆ ಅದಕ್ಕೆ ಗುದ್ದಿ ನಿಲ್ಲಿಸದೇ ಆಟೋ ಮುಂದಕ್ಕೆ ಹೋಯಿತು. ಹಳೆಯ ಸೈಕಲ್ ಇನ್ನೇನು ಮುರಿದು ಬೀಳುವಂತಹ ಸ್ಥಿತಿ, ಅಂತಹದೇ ದೇಹ ಹೊಂದಿದ್ದ ಅಜ್ಜ ಕೆಳಕ್ಕೆ ಬಿದ್ದುಬಿಟ್ಟರು. ಬಿದ್ದದ್ದು ನಿಧಾನವಾದರೂ ಭಯದಿಂದ ಹೃದಯ ನಿಂತೆ ಹೋಗಿಬಿಟ್ಟಿತ್ತು.  ಸೈಕಲ್ ನ ಚಕ್ರ ತಿರುಗುತ್ತಿತ್ತು. ಆದರೆ ಹೃದಯ ಮೌನಿಯಾಗಿತ್ತು. 

ಆಟೋವನ್ನು ಆತ ನಿಲ್ಲಿಸಲಿಲ್ಲ. ಇನ್ನಷ್ಟು ವೇಗವಾಗಿ ಅಲ್ಲಿಂದ ಮರೆಯಾಗುವ ಯೋಚನೆಯಲ್ಲಿದ್ದ. ಆಟೋ ಹಿಂದೆ ಬರೆದ ವಾಕ್ಯ ಪರಿಸ್ಥಿತಿಯನ್ನು ನೋಡಿ ಕಣ್ಣೀರು ಹಾಕುತ್ತಿತ್ತು "ಒಳಿತು ಮಾಡು ಮನುಷಾ, ನೀ ಇರೋದು ಮೂರು ದಿವಸಾ.....

-ಧೀರಜ್ ಬೆಳ್ಳಾರೆ

ಚಿತ್ರ ಕೃಪೆ: ಇಂಟರ್ನೆಟ್ ತಾಣ